ಬೆಂಗಳೂರು: ವಿಧಾನಸೌಧದ ಭದ್ರತಾ ಸಿಬ್ಬಂದಿ ತಮ್ಮ ಆರೋಗ್ಯದ ಕಾಳಜಿ ವಹಿಸುತ್ತಿರುವುದನ್ನು ಕಂಡ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ 1 ಗಂಟೆ ವಾಕ್: ವಿಧಾನಸೌಧದ ಭದ್ರತಾ ಸಿಬ್ಬಂದಿ ಆರೋಗ್ಯ ಕಾಳಜಿಗೆ ಸುರೇಶ್ ಕುಮಾರ್ ಮೆಚ್ಚುಗೆ
ವಿಧಾನಸೌಧದ ಭದ್ರತಾ ಸಿಬ್ಬಂದಿಯ ಆರೋಗ್ಯ ಕಾಳಜಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹವರ ಸಂಖ್ಯೆ ಪೊಲೀಸ್ ಇಲಾಖೆಯಲ್ಲಿ ಹೆಚ್ಚಾಗಲಿ ಎಂದು ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿ ಹಂಚಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮಹತ್ವದ ಸಭೆಗಳನ್ನು ನಡೆಸಿದ ಸಚಿವ ಸುರೇಶ್ ಕುಮಾರ್, ನಂತರ ಇಂದಿನ ಸಭೆಯ ನಡಾವಳಿ ಸಿದ್ಧವಾಗುವುದನ್ನು ಕಾಯುತ್ತಾ ಅಲ್ಲೇ ವಿಹಾರ ನಡೆಸಿದರು. ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಬಿರುಸಾಗಿ ನಡೆಯುತ್ತಾ ಎದುರಾದರು. ಇವರಿಬ್ಬರನ್ನು ಕಂಡ ಸಚಿವರಿಗೆ ಅಚ್ಚರಿಯಾಯಿತು. ಭದ್ರತಾ ಸಿಬ್ಬಂದಿ ಸಾಮಾನ್ಯವಾಗಿ ನಿಯೋಜಿಸಿದ ಜಾಗದಲ್ಲಿ ಗಸ್ತಿನಲ್ಲಿರುತ್ತಾರೆ. ಆದರೆ ಇವರು ಸಮವಸ್ತ್ರದಲ್ಲಿ ಯಾಕೆ ವಿಧಾನಸೌಧದ ರೌಂಡ್ ಹಾಕುತ್ತಿದ್ದಾರೆ ಎನ್ನುವ ಪ್ರಶ್ನೆ ಅವರಲ್ಲಿ ಮೂಡಿದೆ.
ಆ ಸಿಬ್ಬಂದಿಯನ್ನು ಸಚಿವರು ಮಾತನಾಡಿಸಿದಾಗ ಅವರು ಅಜಿತ್ ಕುಮಾರ್ ಮತ್ತು ಸುರೇಶ್ ಎಂದು ಪರಿಚಯಿಸಿಕೊಂಡಿದ್ದಾರೆ. ಪ್ರತಿದಿನ ಒಂದು ಗಂಟೆ ವಾಕಿಂಗ್ಗಾಗಿ ಮೀಸಲಿಟ್ಟಿದ್ದೇವೆ ಎಂದು ಹಾಸನ ಮೂಲದ ಅಜಿತ್ ಕುಮಾರ್ ಹಾಗೂ ವಿಜಯಪುರದ ಸುರೇಶ್ ಹೇಳಿದ್ದಾರೆ. ಭದ್ರತಾ ಸಿಬ್ಬಂದಿಯ ಈ ನಡೆಗೆ ಸಚಿವರು ಫುಲ್ ಖುಷಿಯಾಗಿದ್ದಾರೆ. ಇಂತಹವರ ಸಂಖ್ಯೆ ಪೊಲೀಸ್ ಇಲಾಖೆಯಲ್ಲಿ ಹೆಚ್ಚಾಗಲಿ ಎಂದು ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿ ಹಂಚಿಕೊಂಡಿದ್ದಾರೆ.