ಬೆಂಗಳೂರು :ಕೊರೊನಾ ಹಿನ್ನೆಲೆಯಲ್ಲಿ ಆನ್ಲೈನ್ ತರಗತಿಗಳನ್ನೇ ವಿದ್ಯಾರ್ಥಿಗಳು ಮತ್ತಷ್ಟು ದಿನ ಅವಲಂಬಿಸಬೇಕಿದ್ದು, ಆನ್ ಲೈನ್ ಶಿಕ್ಷಣದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂವಾದ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಪದವಿ ಕಾಲೇಜುಗಳ ಆರಂಭಕ್ಕೆ ಉನ್ನತ ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದ್ದು, ಸಧ್ಯಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆರಂಭದ ಕುರಿತು ಸರ್ಕಾರ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಇನ್ನಷ್ಟು ದಿನ ಆನ್ ಲೈನ್ ತರಗತಿಗಳಿಗೆ ಹಾಜರಾಗುವ ಅನಿವಾರ್ಯತೆ ವಿದ್ಯಾರ್ಥಿಗಳದ್ದಾಗಿದೆ. ಈ ನಡುವೆ ಆನ್ ಲೈನ್ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿರುವ ಆರೋಪಗಳು ಕೇಳಿ ಬರುತ್ತಿದ್ದು ಇದರ ಖುದ್ದು ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಲು ಸಚಿವ ಸುರೇಶ್ ಕುಮಾರ್ ಮುಂದಾಗಿದ್ದಾರೆ.
ಆನ್ಲೈನ್ ಶಿಕ್ಷಣದ ಸಮಸ್ಯೆ : ವಿದ್ಯಾರ್ಥಿಗಳ ಜೊತೆ ಸಚಿವ ಸುರೇಶ್ ಕುಮಾರ್ ಸಂವಾದ ಬಸವೇಶ್ವರನಗರ ವಾರ್ಡಿನ ಬೋವಿ ಕಾಲೋನಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಸತಿ ಯೋಜನೆ ಅಡಿ ನಿರ್ಮಿಸಲಿರುವ ಮನೆಗಳಿಗಾಗಿ ನಡೆದ ಭೂಮಿಪೂಜೆಯಲ್ಲಿ ಭಾಗವಹಿಸಿದ್ದ ಸುರೇಶ್ ಕುಮಾರ್ ನಂತರ ಅದೇ ಪ್ರದೇಶದಲ್ಲಿದ್ದ ವಿವಿಧ ಶಾಲೆಗಳಲ್ಲಿ ವಿವಿಧ ತರಗತಿಗಳಲ್ಲಿ ಓದುತ್ತಿರುವ 2 ನೇ ತರಗತಿಯಿಂದ ಹಿಡಿದು ಒಂಬತ್ತನೇ ತರಗತಿಯವರೆಗೆನ ಮಕ್ಕಳ ಜೊತೆ ಸಂವಾದ ನಡೆಸಿದರು.
ವಿದ್ಯಾರ್ಥಿಗಳೊಂದಿಗೆ ಅವರ ಶಾಲೆಗಳಲ್ಲಿ ನಡೆಯುತ್ತಿರುವ ಆನ್ ಲೈನ್ ಪಾಠಗಳು, ಆನ್ ಲೈನ್ ಟೆಸ್ಟ್ ಗಳು, ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೆಲಕಾಲ ಮಾಹಿತಿ ಪಡೆದರು.
ವಿದ್ಯಾರ್ಥಿಗಳ ಜೊತೆ ಸಚಿವ ಸುರೇಶ್ ಕುಮಾರ್ ಸಂವಾದ ಈಗಾಗಲೇ ಶಾಲೆಗಳ ಆರಂಭ ಕುರಿತು ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ಪರಿಸ್ಥಿತಿ ಅವಲೋಕನ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬಿಬಿಎಂಪಿ, ಆರೋಗ್ಯ ಇಲಾಖೆ, ರಾಜ್ಯದ ಎಲ್ಲ ತಾಲ್ಲೂಕುಗಳ ಎಸ್ ಡಿ ಎಂ ಎಸ್, ಪ್ರತಿನಿಧಿಗಳೊಂದಿದೆ ಚರ್ಚೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದ್ದು, ವರದಿ ಬರುವ ಮೊದಲು ವಿದ್ಯಾರ್ಥಿಗಳಿಂದಲೂ ಸಚಿವ ಸುರೇಶ್ ಕುಮಾರ್ ದೂರು ಸಂಗ್ರಹ ಮಾಡುತ್ತಿದ್ದಾರೆ.