ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ರಾಜ್ಯ ಪೊಲೀಸ್ ಇಲಾಖೆ ’ಸುರಕ್ಷಾ’ ಎಂಬ ಮೊಬೈಲ್ ಆಪ್ ಅನ್ನು ಪರಿಚಯಿಸಿದ್ದು, 112 ಸಂಖ್ಯೆಗೆ ಇಲ್ಲವೇ ಸುರಕ್ಷಾ ಆಪ್ ಮೂಲಕ ನೆರವು ಪಡೆದುಕೊಳ್ಳಬಹುದಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಅಪಘಾತ ಮತ್ತಿತರ ಸಂದರ್ಭಗಳಲ್ಲಿ ಪೊಲೀಸರು ಅಥವಾ ಇನ್ನಿತರ ತುರ್ತು ಸೇವೆಗಳಿಗಾಗಿ ಇರುವ 112 ಸಂಖ್ಯೆಯಲ್ಲಿ ದೂರು ನೀಡಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಮೊಬೈಲ್ ಫೋನ್‌ಗಳ ಬದಲಿಗೆ ಐವಿಆರ್ನಲ್ಲಿ ದೂರು ಸಲ್ಲಿಸಲು ಕಲ್ಪಿಸುವಂತೆ ಕೋರಿ ನಾಗದೇವನಹಳ್ಳಿಯ ಎನ್.ಟಿ.ಅರುಣ್ ಕುಮಾರ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ, ಸಾರ್ವಜನಿಕರ ತುರ್ತು ಸಂದರ್ಭದಲ್ಲಿ ರಕ್ಷಣೆ ಮಾಡುವುದಕ್ಕಾಗಿ ಸುರಕ್ಷಾ ಮೊಬೈಲ್ ಆಪ್ ಪರಿಚಯಿಸಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅರ್ಜಿ ಇತ್ಯರ್ಥ ಪಡಿಸಿತು. ಅಲ್ಲದೇ, ಮೊಬೈಲ್ ಫೋನ್‌ನಲ್ಲಿ ಪ್ಯಾನಿಕ್ ಬಟನ್ ಅಳವಡಿಸಿದ್ದಲ್ಲಿ ಉದ್ದೇಶ ಪೂರ್ವಕವಾಗಿಯೇ ಕೆಲ ಕಿಡಿಗೇಡಿಗಳು, ಅಪ್ರಾಪ್ತರು ಹಾಗೂ ಮಕ್ಕಳು ಉತ್ಸಾಹಕ್ಕಾಗಿ ಪ್ಯಾನಿಕ್ ಬಟನ್ ಒತ್ತಿದ ಸಂದರ್ಭದಲ್ಲಿ ನಿಜವಾಗಿಯೂ ಕಷ್ಟದಲ್ಲಿರುವ ಮತ್ತೊಬ್ಬ ವ್ಯಕ್ತಿಗೆ ನೆರವು ಬೇಕಾದಲ್ಲಿ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ರೀತಿಯ ಸೂಚನೆ ನೀಡಲಾಗದು ಎಂದು ಅಭಿಪ್ರಾಯ ಪಟ್ಟಿದೆ.
ಈ ಸಂಬಂಧ ಪೊಲೀಸ್ ಇಲಾಖೆ ಪ್ರಮಾಣ ಪತ್ರ ಸಲ್ಲಿಸಿದ್ದು, ಸಾರ್ವಜನಿಕರ ರಕ್ಷಣೆಗಾಗಿ ಪ್ರಸ್ತುತ ಇರುವ 112 ಸಂಖ್ಯೆಯ ಜತೆಗೆ ಸುರಕ್ಷಾ ಎಂಬ ಮೊಬೈಲ್ ಫೋನ್ ಅಪ್ಲಿಕೇಷನ್ ಪರಿಚಯ ಮಾಡಲಾಗಿದೆ. ಈ ಅಪ್ಲಿಕೇಷನ್‌ನಲ್ಲಿ ಎಸ್‌ಒಎಸ್ ಬಟನ್ ಇದ್ದು, ಇದು ತುರ್ತು ಸಂದರ್ಭಗಳಲ್ಲಿ ವೈಯಕ್ತಿಕ ರಕ್ಷಣೆಗಾಗಿಯೇ ಸಂಪೂರ್ಣವಾಗಿ ಸಂಯೋಜನೆ ಮಾಡಲಾಗಿದೆ. ಇದರಲ್ಲಿ 10 ಸೆಕೆಂಡ್‌ಗಳ ಕಾಲ ವಿಡಿಯೋ ಮಾಡುವುದಕ್ಕೂ ಅವಕಾಶವಿದ್ದು, ಪೋಲೀಸರು ಹಾಗೂ ಆ್ಯಪ್ನಲ್ಲಿ ಸಂಪರ್ಕಕ್ಕೆ ಅಳವಡಿಸಿರುವ ಸಂಬಂಧಿಕರು ಮತ್ತ ಸ್ನೇಹಿತರಿಗೆ ತಲುಪಿಸಬಹುದಾಗಿದೆ. ಜತೆಗೆ, ಅವರನ್ನು ಜಿಪಿಎಸ್ ಮೂಲಕ ತಲುಪುವುದಕ್ಕೂ ಸಹಕಾರಿಯಾಗಲಿದೆ.