ಬೆಂಗಳೂರು: ಭಕ್ತರ ಕಷ್ಟವನ್ನ ಪರಿಹರಿಸೋ ಆ ಭಗವಂತನಿಗೇ ಇಲ್ಲಿ ಸಂಕಷ್ಟ ಎದುರಾಗಿದೆ. ಬೆಂಗಳೂರಿನ 43 ದೇವಾಲಯಗಳನ್ನ ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದು, ಸಾರ್ವಜನಿಕ ಸ್ಥಳ ಹಾಗೂ ರಸ್ತೆಗಳಲ್ಲಿ ನಿರ್ಮಾಣವಾಗಿರುವ ದೇವಾಲಯ, ಚರ್ಚ್ ಹಾಗೂ ಮಸೀದಿಗಳ ತೆರವಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
2009ರ ನಂತರ ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಕೋರ್ಟ್ ಸೂಚನೆ ನೀಡಿದೆ. ಈ ಪೈಕಿ ಮಾಗಡಿ ರಸ್ತೆಯ ಶ್ರೀ ಸಾಯಿ ಬಾಬಾ ದೇವಸ್ಥಾನ, ಶನಿ ಮಹಾತ್ಮ ದೇವಾಲಯ, ವಿಗ್ನ ನಿವಾರಕ ಗಣೇಶ ದೇವಾಲಯ ಸೇರಿದಂತೆ ನಗರದ 43 ದೇವಾಲಯಗಳನ್ನ ಕೆಡವಲು ಪಾಲಿಕೆ ಮುಂದಾಗಿದೆ.