ಬೆಂಗಳೂರು :ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಆರೋಪದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ವಿನಯ್ ಕುಲಕರ್ಣಿಯ ಜಾಮೀನು ಅರ್ಜಿ ಸಂಬಂಧ ಸುಪ್ರೀಂಕೋರ್ಟ್ ಕೇಂದ್ರ ತನಿಖಾ ಸಂಸ್ಥೆ (CBI) ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್ 5ರಂದು ಬಂಧಿಸಲ್ಪಟ್ಟಿದ್ದಾರೆ. ನ್ಯಾಯಮೂರ್ತಿ ಯು ಯು ಲಲಿತ್, ಅಜಯ್ ರಸ್ತೋಗಿ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠವು ಸಿಬಿಐ ಮತ್ತು ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ, 2021ರ ಜುಲೈ 20ರಂದು ಅಥವಾ ಅದಕ್ಕೂ ಮುನ್ನ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದ ಮಂಡಿಸಿ ಕರ್ನಾಟಕ ಹೈಕೋರ್ಟ್ ತೀರ್ಪಿನ 20 ಮತ್ತು 23ನೇ ಪ್ಯಾರಾಗ್ರಾಫ್ನಲ್ಲಿ ಕುಲಕರ್ಣಿಯನ್ನು ಯಾವುದೇ ರೀತಿಯಲ್ಲಿ ಒಳಗೊಂಡಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು.
ಕುಲಕರ್ಣಿ ಮತ್ತು ಎ1 ಆರೋಪಿಯ ನಡುವೆ ಹಲವಾರು ಕರೆಗಳು ರಾಜಕೀಯ ಸಂಪರ್ಕ ಮತ್ತು ಪರಿಚಯದಿಂದ ಮಾಡಿರುವುದು ಎಂದು ಜಡ್ಜ್ ಮುಂದೆ ಹೇಳಿದ್ದಾರೆ. ಎ1 ಇಂದ ಎ6 ಆರೋಪಿಗಳವರೆಗೆ ಈಗಾಗಲೇ ಜಾಮೀನು ನೀಡಲಾಗಿದೆ. ಆರೋಪಿತ 7 ಮಂದಿಗೆ ಜಾಮೀನು ನೀಡಲಾಗಿದೆ ಎಂದು ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದಿಸಿದ್ದಾರೆ.
ಪ್ರಕರಣದ ಹಿನ್ನೆಲೆ :ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಅವರನ್ನು 2016ರ ಜೂನ್ 15ರಂದು ಧಾರವಾಡದ ಸಪ್ತಾಪುರದ ಜಿಮ್‌ನಲ್ಲಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಧಾರವಾಡ ಪೊಲೀಸರು ಆರು ಜನರನ್ನು ಬಂಧಿಸಿದ್ದರು.
ಬಿಜೆಪಿ ನಾಯಕರ ಬೆಂಬಲವಿರುವ ಯೋಗೇಶ್ ಗೌಡ ಸಹೋದರ ಗುರುನಾಥ ಗೌಡರ್ ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದರು. ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಅಂತಿಮವಾಗಿ ಸಿಬಿಐ ತನಿಖೆಗೆ ನೀಡಲಾಯಿತು. ಸಿಬಿಐ 2019ರ ಸೆ.24ರಂದು ತನಿಖೆ ವಹಿಸಿಕೊಂಡಿದ್ದು, 8 ಆರೋಪಿಗಳನ್ನು ಬಂಧಿಸಿತ್ತು. ಪ್ರಕರಣ ಸಂಬಂಧ 2020ರ ಮೇ 20ರಂದು ಚಾರ್ಜ್‌ಶೀಟ್ ಸಲ್ಲಿಸಿತ್ತು.
ಇದನ್ನೂ ಓದಿ:ಕೆಆರ್ಎಸ್ ಜಲಾಶಯದ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಕ್ರಮ ಕೈಗೊಳ್ಳಬೇಕು : ಎಂಬಿಪಾ
ವಿನಯ್ ಕುಲಕರ್ಣಿಯನ್ನು 2020ರ ನವೆಂಬರ್ 5ರಂದು ಬಂಧಿಸಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ವಿನಯ್ ಕುಲಕರ್ಣಿ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಲಾಗಿದೆ, ಮೊದಲು ಜಿಲ್ಲಾ ನ್ಯಾಯಾಲಯ ಮತ್ತು ನಂತರ ಹೈಕೋರ್ಟ್ ತಿರಸ್ಕರಿಸಿವೆ.
2021ರ ಫೆಬ್ರವರಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪೂರಕ ಚಾರ್ಜ್‌ಶೀಟ್ ಒಂದನ್ನು ಸಲ್ಲಿಸಿತ್ತು. ಮುಂದಿನ ವಿಚಾರಣೆಯನ್ನು 2021 ಜುಲೈ 26ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.