ಕರ್ನಾಟಕ

karnataka

ವಾಣಿಜ್ಯ ಕೋರ್ಟ್​​​​ ಲೋಕಾರ್ಪಣೆಗೊಳಿಸಿದ ಸುಪ್ರೀಂಕೋರ್ಟ್​​ ನ್ಯಾ. ಶಾಂತನಗೌಡರ್

ನಗರದ ನ್ಯಾಯಾಂಗ ಅಕಾಡೆಮಿಯಲ್ಲಿ ಇಂದು ಬೆಂಗಳೂರು ಮಧ್ಯಸ್ತಿಕೆ ಕೇಂದ್ರ ಮತ್ತು ಕರ್ನಾಟಕ ನ್ಯಾಯಾಂಗ ಅಕಾಡೆಮಿಗಳ ನೂತನ ಕಟ್ಟಡ ಶಂಕುಸ್ಥಾಪನೆ ಹಾಗೂ ವಾಣಿಜ್ಯ ಕೋರ್ಟ್​​ಗಳ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು..

By

Published : Feb 6, 2021, 9:08 PM IST

Published : Feb 6, 2021, 9:08 PM IST

Supreme Court Justice Shantanagaudar, inaugurated Commercial Court
ವಾಣಿಜ್ಯ ಕೋರ್ಟ್​​​​ ಲೋಕಾರ್ಪಣೆಗೊಳಿಸಿದ ಸುಪ್ರೀಂಕೋರ್ಟ್​​ ನ್ಯಾಯಮೂರ್ತಿ ಶಾಂತನಗೌಡರ್

ಬೆಂಗಳೂರು :ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಕೋರ್ಟ್​​​ಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗಿದ್ದು, ಅವುಗಳನ್ನು ಇಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್ ಲೋಕಾರ್ಪಣೆಗೊಳಿಸಿದರು.

ವಾಣಿಜ್ಯ ವಿವಾದಗಳನ್ನು ಶೀಘ್ರ ಬಗೆಹರಿಸಲು ನಗರದ ಚಾಲುಕ್ಯ ವೃತ್ತ ಸಮೀಪದ ಬಿಎಸ್ಎನ್ಎಲ್ ಕೇಂದ್ರ ಕಚೇರಿಯ ಕಟ್ಟಡದಲ್ಲಿ ಒಟ್ಟು 9 ವಾಣಿಜ್ಯ ಕಟ್ಟಡಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ 5,800ಕ್ಕೂ ಅಧಿಕ ಪ್ರಕರಣಗಳು ಹಾಗೂ ಗ್ರಾಮಾಂತರ ಜಿಲ್ಲೆ ವ್ಯಾಪ್ತಿಗೆ ಒಳಪಡುವ 1,600ಕ್ಕೂ ಅಧಿಕ ಪ್ರಕರಣಗಳನ್ನು ಈ ನ್ಯಾಯಾಲಯಗಳು ಇತ್ಯರ್ಥಪಡಿಸಲಿವೆ.

ವಾಣಿಜ್ಯ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಮುಂಬೈ ಹಾಗೂ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ನ್ಯಾಯಾಲಯಗಳ ಮಾದರಿಯಲ್ಲೇ ಇವುಗಳನ್ನು ಸ್ಥಾಪಿಸಲಾಗಿದೆ. ನಗರದ ನ್ಯಾಯಾಂಗ ಅಕಾಡೆಮಿಯಲ್ಲಿ ಇಂದು ಬೆಂಗಳೂರು ಮಧ್ಯಸ್ತಿಕೆ ಕೇಂದ್ರ ಮತ್ತು ಕರ್ನಾಟಕ ನ್ಯಾಯಾಂಗ ಅಕಾಡೆಮಿಗಳ ನೂತನ ಕಟ್ಟಡ ಶಂಕುಸ್ಥಾಪನೆ ಹಾಗೂ ವಾಣಿಜ್ಯ ಕೋರ್ಟ್​​ಗಳ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದ ನ್ಯಾ.ಶಾಂತನಗೌಡರ್ ವಾಣಿಜ್ಯ ಕೋರ್ಟ್​​ಗಳನ್ನು ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಬೆಂಗಳೂರು ಮಧ್ಯಸ್ತಿಕೆ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಶಂಕುಸ್ಥಾಪನೆಯನ್ನು ಮುಖ್ಯಮತ್ರಿ ಬಿ ಎಸ್ ಯಡಿಯೂರಪ್ಪ ಅವರು ನೆರವೇರಿಸಿದರೆ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಕೆಎಸ್ಎಲ್ಎಸ್ಎಯಿಂದ ಬಡವರು ಉಚಿತ ಕಾನೂನು ಸೇವೆ ಪಡೆದುಕೊಳ್ಳಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡುವುದಕ್ಕೆ ಸಂಬಂಧಿಸಿದಂತೆ ಜಯಂತ್ ಕಾಯ್ಕಿಣಿ ರಚಿಸಿ, ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಕಾಲ್ಸಾ ಹಾಡನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ನ್ಯಾಯಾಂಗ ವ್ಯವಸ್ಥೆಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕರ್ತವ್ಯ. ಅದರಂತೆ ನ್ಯಾಯದಾನ ವ್ಯವಸ್ಥೆ ಬಲಪಡಿಸಲು ನಮ್ಮ ಸರ್ಕಾರ ಬದ್ಧ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್, ಎ.ಎಸ್. ಬೋಪಣ್ಣ, ಹೈಕೋರ್ಟ್ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರಶರ್ಮಾ, ಬಿ.ವಿ ನಾಗರತ್ನ, ಅರವಿಂದ್ ಕುಮಾರ್, ಅಲೋಕ್ ಆರಾಧೆ, ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್ ಶೆಟ್ಟಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ಹಾಗೂ ನ್ಯಾಯಾಂಗ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ನಕಲಿ ವೈದ್ಯರು; ಶಿಸ್ತುಕ್ರಮಕ್ಕೆ ಶಿಫಾರಸು ಪತ್ರ

ABOUT THE AUTHOR

...view details