ಬೆಂಗಳೂರು:ಕೋವಿಡ್ ವಿಚಾರದಲ್ಲಿ ನಿರಂತರವಾಗಿ ಆಗುತ್ತಿರುವ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸರಿಯಾಗಿಯೇ ಮುಖಭಂಗ ಮಾಡುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸರಿಯಾಗಿಯೇ ಮುಖಭಂಗ ಮಾಡುತ್ತಿದೆ: ದಿನೇಶ್ ಗುಂಡೂರಾವ್
ಕೇಂದ್ರ ಸರ್ಕಾರದ ಅಸಮರ್ಪಕ ಲಸಿಕಾ ನೀತಿ ಬಗ್ಗೆ ಸುಪ್ರೀಂಕೋರ್ಟ್ ಪದೇ ಪದೇ ಚಾಟಿ ಬೀಸುತ್ತಿದೆ. ನ್ಯಾಯಾಲಯದಲ್ಲಿ ಕೇಂದ್ರಕ್ಕೆ ಸರಣಿ ಮುಖಭಂಗವಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕೇಂದ್ರ ಸರ್ಕಾರದ ಅಸಮರ್ಪಕ ಲಸಿಕಾ ನೀತಿ ಬಗ್ಗೆ ಸುಪ್ರೀಂಕೋರ್ಟ್ ಪದೇ ಪದೇ ಚಾಟಿ ಬೀಸುತ್ತಿದೆ. ಇದು ನ್ಯಾಯಾಲಯದಲ್ಲಿ ಕೇಂದ್ರಕ್ಕೆ ಸರಣಿ ಮುಖಭಂಗ. ಕಾರ್ಯಾಂಗದ ಅಧಿಕಾರ ವ್ಯಾಪ್ತಿಯಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಬಾರದು ಎಂಬ ಕೇಂದ್ರದ ವಾದ ಉದ್ಧಟತನದ್ದು. ಕೇಂದ್ರದ ಮನೆಹಾಳು ನೀತಿಯಿಂದ ಜನ ಸಾಯುವುದನ್ನು ನೋಡಿಯೂ ಕೋರ್ಟ್ ಮೌನವಾಗಿರಬೇಕೆ? ಎಂದು ಕೇಳಿದ್ದಾರೆ.
ಕಳೆದ ಬಜೆಟ್‌ನಲ್ಲಿ ಲಸಿಕಾ ಯೋಜನೆಗಾಗಿ ಕೇಂದ್ರ 35 ಸಾವಿರ ಕೋಟಿ ಮೀಸಲಿಟ್ಟಿತ್ತು. ಆ ಹಣ ಎಲ್ಲಿದೆ? ಅದೇ ಹಣದಲ್ಲಿ 18 ರಿಂದ 44 ವರ್ಷದೊಳಗಿನವರಿಗೆ ಉಚಿತ ಲಸಿಕೆ ನೀಡಬಹುದಲ್ಲವೇ? ಆದರೆ ಬಿಜೆಪಿಯ ಸಂಸದರು ಹಾಗೂ ಶಾಸಕರು ಖಾಸಗಿ ಆಸ್ಪತ್ರೆಯ ರಾಯಭಾರಿಗಳಂತೆ ದುಡ್ಡು ಕೊಟ್ಟು ಲಸಿಕೆ ಪಡೆಯಲು ಪ್ರಚಾರ ಮಾಡುತ್ತಾರೆ. ಇದನ್ನು ಕೋರ್ಟ್ ಪ್ರಶ್ನಿಸಬಾರದೆ? ಎಂದಿದ್ದಾರೆ.
ಬಜೆಟ್‌ನಲ್ಲಿ ಲಸಿಕಾ ಯೋಜನೆಗೆ ಮೀಸಲಿಟ್ಟ 35 ಸಾವಿರ ಕೋಟಿಯನ್ನು ಲಸಿಕೆಗೆ ಬಳಸಬೇಕಿರುವುದು ಕೇಂದ್ರದ ಕರ್ತವ್ಯ. ಬಜೆಟ್‌ನಲ್ಲಿ ಹಣ ಮೀಸಲಿಟ್ಟರೂ ಜನ, ಯಾಕೆ ದುಡ್ಡು ಕೊಟ್ಟು ಲಸಿಕೆ ಪಡೆಯಬೇಕು? ಇನ್ನು ಲಸಿಕೆಗೆ ವಿವಿಧ ಆಸ್ಪತ್ರೆಗಳಲ್ಲಿ ವಿವಿಧ ದರ ವಿಧಿಸಲಾಗ್ತಿದೆ. ಎಲ್ಲೂ ಏಕರೂಪ ದರವಿಲ್ಲ. ಇದು ಕೇಂದ್ರದ ಲಸಿಕಾ ನೀತಿಯ ವೈಫಲ್ಯವಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.