ಕರ್ನಾಟಕ

karnataka

ETV Bharat / state

ಪಂಚಮಸಾಲಿ - ಕುರುಬರ ಮೀಸಲು ಬೇಡಿಕೆಗೆ ಅಂತಿಮ ವಿರಾಮ ಹಾಕಿದ ಸುಪ್ರೀಂಕೋರ್ಟ್ ತೀರ್ಪು - panchamsali reservation Demand

ಮರಾಠ ಮೀಸಲು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕರ್ನಾಟಕದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯ ಹಾಗೂ ಕುರುಬ ಸಮುದಾಯ ಇಟ್ಟಿರುವ ಮೀಸಲಾತಿ ಬೇಡಿಕೆಗೆ ಅಂತಿಮ ವಿರಾಮ ಹಾಕಿದೆ.

supreme
supreme

By

Published : May 7, 2021, 9:05 PM IST

ಬೆಂಗಳೂರು : ಕಳೆದೊಂದು ವರ್ಷದಿಂದೀಚೆಗೆ ಮೀಸಲು ನೀಡುವಂತೆ ಒತ್ತಾಯಿಸಿ ಲಿಂಗಾಯತ ಪಂಚಮಸಾಲಿ ಸಮುದಾಯ ಹಾಗೂ ಕುರುಬ ಸಮುದಾಯ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದವು. ಅದಕ್ಕಾಗಿ ರಾಜ್ಯವ್ಯಾಪಿ ಹೋರಾಟವನ್ನೂ ನಡೆಸಿದ್ದವು. ಇದೀಗ ಮರಾಠ ಮೀಸಲು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಇವರೆಲ್ಲರ ಮೀಸಲು ಬೇಡಿಕೆಗೆ ಅಂತಿಮ ವಿರಾಮ ಹಾಕಿದೆ.

ಮರಾಠ ಮೀಸಲು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ರಾಜ್ಯದಲ್ಲಿ ಮೀಸಲು ಕೋರಿ ಸರ್ಕಾರದ ಮೇಲೆ ರಾಜಕೀಯವಾಗಿ ಒತ್ತಡ ಹೇರುತ್ತಿದ್ದ ಎಲ್ಲರಿಗೂ ಲಕ್ಷಣ ರೇಖೆ ಎಳೆದಿದೆ. ನ್ಯಾ. ಅಶೋಕ್ ಭೂಷಣ್, ನ್ಯಾ. ಎಸ್. ಅಬ್ದುಲ್ ನಜೀರ್, ನ್ಯಾ. ಎಲ್. ನಾಗೇಶ್ವರ ರಾವ್, ನ್ಯಾ. ಹೇಮಂತ್ ಗುಪ್ತಾ ಹಾಗೂ ನ್ಯಾ. ಎಸ್ ರವೀಂದ್ರ ಭಟ್ ಸೇರಿದಂತೆ ಸುಪ್ರೀಂ ಕೋರ್ಟ್​​​​ನ 5 ಮಂದಿ ನ್ಯಾಯಾಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ಮುಂದಿನ ದಿನಗಳಲ್ಲಿ ಇತರ ಸಮುದಾಯಗಳಿಂದಲೂ ಉದ್ಭವಿಸಬಹುದಾಗಿದ್ದ ಮೀಸಲು ಬೇಡಿಕೆಯನ್ನು ತಣ್ಣಗಾಗಿಸಿದೆ.

ಮರಾಠ ಮೀಸಲು :
ಮಹಾರಾಷ್ಟ್ರ ಸರ್ಕಾರ (ಅಂದಿನ ಬಿಜೆಪಿ ಸರ್ಕಾರ) 2018ರಲ್ಲಿ ಮರಾಠ ಸಮುದಾಯವನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ(ಎಸ್ಇಬಿಸಿ) ಎಂದು ತೀರ್ಮಾನಿಸಿ, ಅವರಿಗಾಗಿ ಕಾಯ್ದೆಯೊಂದನ್ನು ಜಾರಿ ಮಾಡಿ ಶೇ. 16ರಷ್ಟು ಮೀಸಲು ನೀಡಿತ್ತು. ಕಾಯ್ದೆಯು ಸಂವಿಧಾನದ 102ನೇ ತಿದ್ದುಪಡಿ ಮೂಲಕ ಜಾರಿಗೆ ತಂದಿರುವ ವಿಧಿ 338(ಬಿ) ಹಾಗೂ 342(ಎ) ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಅರ್ಜಿಗಳನ್ನು ವಜಾ ಮಾಡಿತ್ತು.

102ನೇ ತಿದ್ದುಪಡಿ :
2018ರಲ್ಲಿ ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿ ಮಾಡಿ 338 (ಬಿ) ಹಾಗೂ 342(ಎ) ವಿಧಿಗಳನ್ನು ಸೇರಿಸಿದೆ. 338(ಬಿ) ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ರಚನೆ, ಅಧಿಕಾರ ಮತ್ತು ಕರ್ತವ್ಯಗಳನ್ನು ಹೇಳುತ್ತದೆ. ಇನ್ನು 342(ಎ) ವಿಧಿ ನಿರ್ದಿಷ್ಟ ಜಾತಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ಸೇರುತ್ತದೆಯೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ರಾಷ್ಟ್ರಪತಿಗಳಿಗೆ ನೀಡುತ್ತದೆ. ಹಾಗೆಯೇ ಮೀಸಲು ಪಟ್ಟಿಯನ್ನು ಬದಲಿಸುವ ಅಧಿಕಾರವನ್ನು ಸಂಸತ್ತಿಗೆ ನೀಡುತ್ತದೆ.

ಸುಪ್ರೀಂ ಕೋರ್ಟ್ ತೀರ್ಪು :
ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಮೇ.5ರಂದು 569 ಪುಟಗಳ ವಿವರವಾದ ತೀರ್ಪು ಪ್ರಕಟಿಸಿದೆ. ತೀರ್ಪಿನಲ್ಲಿ ಸಂವಿಧಾನದ ವಿಧಿ 16(4) ಪ್ರಕಾರ ನೀಡುವ ಮೀಸಲು ಶೇ.50ರಷ್ಟನ್ನು ಮೀರುವಂತಿಲ್ಲ ಎಂದು ಈ ಮೊದಲೇ ಇಂದಿರಾ ಸಾಹ್ನಿ ಪ್ರಕರಣದಲ್ಲಿ(1992) ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಮೀಸಲು ಶೇ. ಮೀರುವಂತಿಲ್ಲ ಎಂದು ನೀಡಿರುವ ಆದೇಶವನ್ನು ಮರುಪರಿಶೀಲಿಸುವ ಅಗತ್ಯವಿಲ್ಲ. ಅದರಂತೆ, ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ನೀಡಿರುವ ಮೀಸಲು ಸಂವಿಧಾನ ಬಾಹಿರ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ, ಐವರು ನ್ಯಾಯಮೂರ್ತಿಗಳ ಪೈಕಿ ಮೂವರು ನ್ಯಾಯಮೂರ್ತಿಗಳು ಸಂವಿಧಾನದ 102ನೇ ತಿದ್ದುಪಡಿಯಂತೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸುವ ಅಧಿಕಾರ ರಾಜ್ಯಗಳಿಗಿಲ್ಲ. ಈ ಅಧಿಕಾರ ಕೇಂದ್ರಕ್ಕಷ್ಟೇ ಮೀಸಲು ಎಂದಿದ್ದಾರೆ.

ರಾಜ್ಯದಲ್ಲಿ ಮೀಸಲು ಒತ್ತಾಯ :ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪು ಯಾವೆಲ್ಲ ಎಲ್ಲ ರಾಜ್ಯಗಳಿಗೂ ಅನ್ವಯಿಸಲಿದ್ದು, ಮೀಸಲು ಹೋರಾಟಗಳಿಗೆ ಅಂತಿಮ ವಿರಾಮ ಹಾಕಿದೆ. ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯ ಪ್ರವರ್ಗ 2(ಎ)ಗೆ ಸೇರಿಸುವಂತೆ ಒತ್ತಾಯಿಸುತ್ತಿದೆ. ಪ್ರವರ್ಗ 2(ಎ) ಅಡಿ ಬರುವ ಕುರುಬ ಸಮುದಾಯ ಎಸ್ ಟಿ ಮೀಸಲು ಸೌಲಭ್ಯ ಕೇಳುತ್ತಿದೆ. ಇನ್ನು ಈಗಾಗಲೇ ಎಸ್​ಟಿ ಸಮುದಾಯದ ಅಡಿ ಸೌಲಭ್ಯ ಪಡೆಯುತ್ತಿರುವ ವಾಲ್ಮೀಕಿ ಸಮುದಾಯ ತಮ್ಮ ಮೀಸಲು ಪ್ರಮಾಣವನ್ನು ಹೆಚ್ಚಿಸುವಂತೆ ಕೋರಿಕೆ ಇಟ್ಟಿದೆ. ಇವರಂತೆಯೇ ಹಲವು ಸಮುದಾಯಗಳು ಮೀಸಲು ನೀಡುವಂತೆ ರಾಜ್ಯ ಸರ್ಕಾರದ ಮೇಲೆ ರಾಜಕೀಯ ಮುಖಂಡರ ಮೂಲಕ, ಧಾರ್ಮಿಕ ಮುಖಂಡರ ಮೂಲಕ ನಿರಂತರ ಒತ್ತಡ ಹಾಕುತ್ತಿವೆ. ಪ್ರಸ್ತುತ ಇವರನ್ನು ನಿಭಾಯಿಸುವುದು ರಾಜ್ಯ ಸರ್ಕಾರಕ್ಕೂ ಸವಾಲು ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಸುಪ್ರೀಂಕೋರ್ಟ್ ಸಂವಿಧಾನದ ವಿಧಿ 16(4) ಅಡಿ ನೀಡುವ ಮೀಸಲು ಸೌಲಭ್ಯ ಶೇ.50ರಷ್ಟನ್ನು ಮೀರುವಂತಿಲ್ಲ ಎಂದು ಖಚಿತವಾಗಿ ಹೇಳಿರುವುದರಿಂದ ಸದ್ಯಕ್ಕಂತೂ ಇವರೆಲ್ಲರ ಬೇಡಿಕೆಗೆ ಬ್ರೇಕ್ ಬಿದ್ದಿದೆ.

ರಾಜ್ಯದಲ್ಲಿ ಮೀಸಲು :
ರಾಜ್ಯದಲ್ಲಿ ಈಗಾಗಲೇ ಶೇ. 50ರಷ್ಟು ಮೀಸಲು ಸೌಲಭ್ಯವನ್ನು ಸಂಪೂರ್ಣವಾಗಿ ನೀಡಲಾಗಿದೆ. ಎಸ್‍ಸಿ ಸಮುದಾಯಕ್ಕೆ ಶೇ 15 ರಷ್ಟು. ಎಸ್‍ಟಿ ಸಮುದಾಯಕ್ಕೆ ಶೇ 3 ರಷ್ಟು, ಪ್ರವರ್ಗ 1ಕ್ಕೆ ಶೇ. 4ರಷ್ಟು, ಪ್ರವರ್ಗ 2(ಎ) ಶೇ 15 ರಷ್ಟು, ಪ್ರವರ್ಗ 2(ಬಿ)ಗೆ ಶೇ 4 ರಷ್ಟು, ಪ್ರವರ್ಗ 3(ಎ)ಗೆ ಶೇ 4 ರಷ್ಟು, ಪ್ರವರ್ಗ 3(ಬಿ) ಶೇ 5 ರಷ್ಟು ನೀಡಲಾಗಿದೆ. ಹೀಗಾಗಿ ಹೊಸದಾಗಿ ಸಲ್ಲಿಕೆಯಾಗುತ್ತಿರುವ ಬೇಡಿಕೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ಮೀಸಲು ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸಿಕೊಳ್ಳಲು ರಾಜ್ಯಕ್ಕೆ ಯಾವುದೇ ಅವಕಾಶ ಇಲ್ಲವಾಗಿದೆ. ಇನ್ನು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ರಾಜ್ಯಗಳು ಹಿಂದುಳಿದ ವರ್ಗಗಳ "ರಾಜ್ಯಪಟ್ಟಿ" ಪಟ್ಟಿಯನ್ನು ಪರಿಷ್ಕರಿಸುವ ಅಧಿಕಾರ ಹೊಂದಿವೆ ಎಂದು ಸ್ಪಷ್ಟಪಡಿಸಿದೆ. ಆದರೆ, ಈಗಿರುವ ಮೀಸಲು ಸೌಲಭ್ಯದಲ್ಲಿ ಕತ್ತರಿ ಹಾಕಿ ಬೇರೆ ಸಮುದಾಯಗಳಿಗೆ ಮೀಸಲು ಕಲ್ಪಿಸಲು ಮುಂದಾದಲ್ಲಿ ಅದು ಹಾವಿರುವ ಹುತ್ತದಲ್ಲಿ ನೇರವಾಗಿ ಕೈಹಾಕಿದಂತೆ ಎಂಬುದು ರಾಜ್ಯ ಸರ್ಕಾರಕ್ಕೂ ಗೊತ್ತಿದೆ. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿವಿಧ ಸಮುದಾಯಗಳ ಮೀಸಲು ಬೇಡಿಕೆಯಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅತ್ಯುತ್ತಮ ಮಾರ್ಗವಾಗಿದೆ.

ABOUT THE AUTHOR

...view details