ಕರ್ನಾಟಕ

karnataka

ETV Bharat / state

ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ವಿಚಾರ: ಸದನದಲ್ಲಿ ಶಿವಲಿಂಗೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ವಾಗ್ವಾದ! - ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಿವಲಿಂಗೇಗೌಡ

ಕೇಂದ್ರ ಬಿಜೆಪಿ ಸರ್ಕಾರ ಕೊಬ್ಬರಿಗೆ ನೀಡುತ್ತಿದ್ದ ಬೆಂಬಲ ಬೆಲೆ ಸ್ಥಗಿತಗೊಳಿಸಿದೆ ಎಂದು ಶಿವಲಿಂಗೇಗೌಡ ಆರೋಪಿಸಿದರೆ, ಕಾಂಗ್ರೆಸ್ ನಾಯಕರು ಕೊಬ್ಬರಿಗೆ ಪ್ರತಿ ಕ್ವಿಂಟಾಲ್ ಗೆ 15 ಸಾವಿರ ರೂ. ನೀಡಿ ಖರೀದಿಸುವುದಾಗಿ ಭರವಸೆ ನೀಡಿದ್ದಾರೆ ಎಂಬ ಪತ್ರಿಕೆಯೊಂದರ ವರದಿಯನ್ನು ಕುಮಾರಸ್ವಾಮಿ ಸದನಲ್ಲಿ ಪ್ರದರ್ಶಿಸಿ ತಿರುಗೇಟು ನೀಡಿದರು.

MLA Shivalingegowda, former CM HD Kumaraswamy
ಶಾಸಕ ಶಿವಲಿಂಗೇಗೌಡ ,ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

By

Published : Jul 4, 2023, 3:57 PM IST

Updated : Jul 4, 2023, 5:30 PM IST

ಶಿವಲಿಂಗೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ವಾಗ್ವಾದ

ಬೆಂಗಳೂರು:ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ವಿಚಾರ ಕುರಿತು ಆಡಳಿತ ಪಕ್ಷದ ಸದಸ್ಯ ಶಿವಲಿಂಗೇಗೌಡ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ನಡುವೆ ಇಂದು ವಿಧಾನಸಭೆಯಲ್ಲಿ ಆಕ್ರೋಶಭರಿತ ವಾಗ್ವಾದ ನಡೆಯಿತು.

ಬಿಜೆಪಿ ಸದಸ್ಯರ ಮುಂದುವರೆದ ಧರಣಿ ನಡುವೆಯೇ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಿವಲಿಂಗೇಗೌಡ, ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಬ್ಬರಿಗೆ ಸೂಕ್ತ ರೀತಿಯಲ್ಲಿ ಬೆಂಬಲ ಬೆಲೆ ನೀಡುವ ಮೂಲಕ ಸರ್ಕಾರ ತೆಂಗು ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೊಬ್ಬರಿಗೆ ನೀಡುತ್ತಿದ್ದ ಬೆಂಬಲ ಬೆಲೆಯನ್ನು ಸ್ಥಗಿತಗೊಳಿಸಿದೆ. ಕರ್ನಾಟಕ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತೆಂಗು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರೈತರ ನೆರವಿಗೆ ಬಾರದ ಬಿಜೆಪಿ ಸದಸ್ಯರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಎದ್ದು ನಿಂತು, ಶಿವಲಿಂಗೇಗೌಡರ ವಿರುದ್ಧ ತಿರುಗಿ ಬಿದ್ದರು. ಬಿಜೆಪಿ ವಿರುದ್ಧ ಶಿವಲಿಂಗೇಗೌಡರ ಆರೋಪವನ್ನು ತಳ್ಳಿಹಾಕುವ ಮೂಲಕ ಬಿಜೆಪಿ ಪರ ನಿಂತರು. ಮಾತು ಮುಂದುವರಿಸಿದ ಹೆಚ್​​​​ಡಿಕೆ, ಶಿವಲಿಂಗೇಗೌಡರಿಗೆ ಏಕಾಏಕಿ ತೆಂಗು ಬೆಳೆಗಾರರ ಬಗ್ಗೆ ಅನುಕಂಪ ಬಂದಿದೆ. ಕಾಂಗ್ರೆಸ್ ನಾಯಕರೇ ಕೊಬ್ಬರಿಗೆ ಪ್ರತಿ ಕ್ವಿಂಟಾಲ್ ಗೆ 15 ಸಾವಿರ ರೂ. ನೀಡಿ ಖರೀದಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರಲ್ಲದೇ, ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಸದನಲ್ಲಿ ಪ್ರದರ್ಶಿಸಿದರು.

ಕುಮಾರಸ್ವಾಮಿ ಅವರ ಬೆಂಬಲಕ್ಕೆ ಅವರ ಸಹೋದರ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಧ್ವನಿಗೂಡಿಸಿದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಿವಲಿಂಗೇಗೌಡ ಮತ್ತು ಕುಮಾರಸ್ವಾಮಿ ಅವರ ನಡುವೆ ಬಹಳ ಸಮಯ ನೇರ ನೇರ ಮಾತಿನ ಚಕಮಕಿ ನಡೆಯಿತು. ಸಭಾಧ್ಯಕ್ಷ ಯು ಟಿ ಖಾದರ್ ಅವರು, ರೈತರ ಸಮಸ್ಯೆಗಳ ಗಂಭೀರ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷಗಳ ಸದಸ್ಯರು ಧರಣಿ ಕೈಬಿಟ್ಟು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ಸುಗಮ ಕಲಾಪಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರೂ ಯಾವುದೇ ಫಲ ನೀಡಲಿಲ್ಲ.

ಜೆಡಿಎಸ್ ಸದಸ್ಯರ ಧರಣಿ :ಇತ್ತ ಜೆಡಿಎಸ್ ಸದಸ್ಯರು ತೆಂಗು ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು. ನಾವು ಸಹ ರೈತರ ಸಮಸ್ಯೆ ಕುರಿತು ಚರ್ಚಿಸಲು ನಿಲುವಳಿ ಸೂಚನೆ ಕಳುಹಿಸಿದ್ದೇವೆ. ನಮಗೂ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿ ಸಭಾಧ್ಯಕ್ಷದ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು.

ನಮಗೂ ಧೋಖಾ, ನಿಮಗೂ ಧೋಖಾ: ಈ ಮಧ್ಯೆ ಬಿಜೆಪಿ ಸದಸ್ಯರು ಸದನ ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿ, ನಮಗೂ ಧೋಖಾ, ನಿಮಗೂ ಧೋಖಾ ಎಂದು ಘೋಷಣೆ ಕೂಗಿದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ,ಸರ್ಕಾರದ ಡಿಎನ್​​ಎದಲ್ಲಿಯೇ ದೋಖಾ ಇದೆ. ಸ್ಪೀಕರ್ ಅವರೇ ನಿಮಗೂ ಧೋಖಾ ಮಾಡಿದ್ದಾರೆ. ಅದಕ್ಕೆ ನಿಮ್ಮನ್ನು ಮೇಲೆ ಕೂರಿಸಿದ್ದಾರೆ ಎಂದು ಏರಿದ ಧ್ವನಿಯಲ್ಲಿ ಕೂಗಿದರು.

ಪ್ರತ್ಯೇಕ ವಿಚಾರಗಳಿಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದಲ್ಲಿ ಧರಣಿ ಮುಂದುವರಿಸಿ ಗದ್ದಲ ಎಬ್ಬಿಸಿದ್ದರಿಂದ ಉಂಟಾದ ಗೊಂದಲದ ನಡುವೆ ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ಇದನ್ನೂಓದಿ:ಕುಮಾರಸ್ವಾಮಿ ಅವರಿಂದ ಸಿದ್ದರಾಮಯ್ಯ ಕಲಿಯುವ ಅವಶ್ಯಕತೆ ಇಲ್ಲ: ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್

Last Updated : Jul 4, 2023, 5:30 PM IST

ABOUT THE AUTHOR

...view details