ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವ ಜಿಲ್ಲೆಯ ಬಹುಕಾಲದ ಬೇಡಿಕೆಗೆ ಈ ವರ್ಷದ ಬಜೆಟ್ನಲ್ಲಿ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಪ್ರಸಕ್ತ ವರ್ಷ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಚುನಾವಣಾ ವರ್ಷದ ಹೊಸ್ತಿಲಿನ ಬಿಗ್ ಬಜೆಟ್ನಲ್ಲಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಇದರ ಜೊತೆಗೆ ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿಗಳಲ್ಲಿ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜತೆಗೆ ಪ್ರಸಕ್ತ ವರ್ಷದಲ್ಲಿ ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು ಎಂದು ರಾಯಚೂರಿನ ಜನತೆಗೆ ಮಾತ್ರವಲ್ಲದೇ ಪಕ್ಕದ ಜಿಲ್ಲೆಗಳ ಜನರಿಗೂ ಆರೋಗ್ಯ ಭರವಸೆಯನ್ನು ಸಿಎಂ ನೀಡಿದ್ದಾರೆ. ಕ್ಯಾನ್ಸರ್ ಪತ್ತೆಗೆ ಅಗತ್ಯ ಸಾಧನಗಳ ಖರೀದಿಗೆ 12 ಕೋಟಿ ಅನುದಾನ ಮೀಸಲಿಡಲಾಗಿದೆ.
ಇದುವರೆಗೆ ಕಾಗದದಲ್ಲಿ ದಾಖಲಾಗುತ್ತಿದ್ದ ರೋಗಿಗಳ ಆರೋಗ್ಯ ದಾಖಲೆಗಳನ್ನು ಒಂದೆಡೆ ದೀರ್ಘ ಕಾಲದ ವರೆಗೆ ಸುರಕ್ಷಿತವಾಗಿ ಕ್ರೋಡೀಕರಿಸಲು, ರೋಗಿಗಳ ಅನುಮತಿ, ಸಮ್ಮತಿಯೊಂದಿಗೆ ವೈದ್ಯಕೀಯ ದಾಖಲಾತಿಗಳನ್ನು ಡಿಜಿಟಲೀಕರಣ ಮಾಡಲಾಗುವುದು. ಕಾಗದ ರೂಪದಲ್ಲಿದ್ದ ದಾಖಲೆಗಳು ಕಾರಣಾಂತರಗಳಿಂದ ರೋಗಿಗಳಿಂದ ಕೈತಪ್ಪಿ ಹೋಗುವ ಹಾಗೂ ಆಸ್ಪತ್ರೆಗಳನ್ನು ತಪ್ಪಿ ಹೋಗುವ ಸಾಧ್ಯತೆಗಳಿವೆ. ಹಾಗಾಗಿ ಆ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿದರೆ, ಮತ್ತೊಮ್ಮೆ ಚಿಕಿತ್ಸೆ ಬರುವಾಗ, ರೋಗಿಗಳಿಗೆ ಹಾಗೂ ವೈದ್ಯರಿಗೆ ಇಬ್ಬರಿಗೂ ಸಹಾಯಕವಾಗಲಿದೆ.
ಜನಸಾಮಾನ್ಯರ ಮಾನಸಿಕ ಆರೋಗ್ಯ ಕಾಪಾಡಲು ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಿಮ್ಹಾನ್ಸ್ ಸಹಯೋಗದೊಂದಿಗೆ ಕರ್ನಾಟಕ ಮೆದುಳು ಯೋಜನೆಯನ್ನು ಪ್ರಾರಂಭಿಸಿ, ಆ ಯೋಜನೆಗೆ 25 ಕೋಟಿ ರೂ. ವ್ಯಯಿಸಿ ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿ ಹ್ಯಾಂಡ್ ಹೋಲ್ಡ್ ಎಕ್ಸ್ ರೇ ಯಂತ್ರಗಳ ಸಹಾಯದಿಂದ ಕ್ಷಯ ರೋಗಿಗಳ ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸಮುದಾಯ ಆಧಾರಿತ ತಪಾಸಣೆ ಚಟುವಟಿಕೆ ನಡೆಸಲು 12.50 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಜನರ ಆರೋಗ್ಯ ಕಾಪಾಡುವ ಗುರಿ ಹೊಂದಿರುವ ಸರ್ಕಾರ, ಬಜೆಟ್ನಲ್ಲಿ 'ಮನೆ ಮನೆಗೆ ಆರೋಗ್ಯ' ಎನ್ನುವ ಕಾರ್ಯಕ್ರಮ ಘೋಷಣೆ ಮಾಡಿದ್ದು, ಇದರಡಿಯಲ್ಲಿ ರಾಜ್ಯದ ಗ್ರಾಮೀಣ ಜನರಿಗೆ ಈ ಸಾಲಿನಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಹಳ್ಳಿಗಳಲ್ಲಿ ಎರಡು ಬಾರಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು. ತೀವ್ರವಾದ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚುವ ಕೆಲಸವಾಗಲಿದೆ. ಅದರ ಜೊತೆಗೆ ಈ ಯೋಜನೆಯಡಿಯಲ್ಲೇ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಔಷಧಗಳನ್ನು ತಲುಪಿಸುವಂತೆ ಕ್ರಮ ವಹಿಸಲಾಗುವುದು ಎಂದು ಬಜೆಟ್ನಲ್ಲಿ ಹೇಳಿದ್ದಾರೆ.