ಬೆಂಗಳೂರು: ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಸಹೋದರ ದೀಪಕ್ ಹತ್ಯೆಗೆ ಪ್ಲಾನ್ ಕೇಸ್ ಸಂಬಂಧ ಆರೋಪಿಗಳು ಸಿಕ್ಕಿ ಬೀಳುವ ಒಂದು ವಾರದ ಹಿಂದೆಯೇ ಹಣಕಾಸಿನ ವಿಚಾರಕ್ಕಾಗಿ ದೀಪಕ್ ಗೌಡನಿಗೆ ವಿಡಿಯೋ ಕಾಲ್ ಮಾಡಿ ಕುಖ್ಯಾತ ರೌಡಿ ಬಾಂಬೆ ರವಿ ಬೆದರಿಕೆ ಹಾಕಿದ್ದ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಸಂಬಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಬಾಂಬೆ ರವಿ ಸಹಚರ ಎನ್ನಲಾಗುವ ಮಂಜುನಾಥ್, ದೀಪಕ್ ಗೌಡನ ಮನೆಗೆ ಹೋಗಿ ಅಣ್ಣ ಮಾತನಾಡುತ್ತಾರೆ ಎಂದು ವಿಡಿಯೋ ಕಾಲ್ ಮಾಡಿ ಕೊಟ್ಟಿದ್ದ. ಮತ್ತೋರ್ವ ರೌಡಿ ಸೈಕಲ್ ರವಿ ಜೊತೆಗಿದ್ದರೂ ಅಷ್ಟೇ ಡೀಲ್ ಹಣ ನನಗೂ ಬರಬೇಕು, ಇಲ್ಲದಿದ್ದರೆ ಅಷ್ಟೇ ಎಂದು ಧಮಕಿ ಹಾಕಿದ್ದ ಎನ್ನಲಾಗಿದೆ. ಈ ಸಂಬಂಧ ದೀಪಕ್ ದೂರು ನೀಡಿರಲಿಲ್ಲ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ರೌಡಿಗಳಾದ ಸೈಕಲ್ ರವಿ ಮತ್ತು ಸಹಚರ ಬೇಕರಿ ರಘುನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.