ಬೆಂಗಳೂರು: ಕೂಲಿಕಾರ್ಮಿಕರು ಸಿಗದೇ ಪರದಾಡುವ ಪರಿಸ್ಥಿತಿ ರಾಜ್ಯದ ಬಹುತೇಕ ಜಿಲ್ಲೆಯ ರೈತರದ್ದಾಗಿದೆ. ಸಕಾಲಕ್ಕೆ ತಾವು ಬೆಳೆದ ಬೆಳೆಗೆ ಕೀಟನಾಶಕ ಸಿಂಪಡಣೆ ಆಗದಿದ್ದರೆ ಬೆಳೆ ಕೈಗೆ ಬರುವ ಮುನ್ನವೇ ಕೀಟಗಳ ಪಾಲಾಗುತ್ತದೆ. ಇದಾಗದಂತೆ ತಡೆಯುವುದೇ ಇಂದು ದೊಡ್ಡ ಸವಾಲಾಗಿದೆ.
ದ್ರಾಕ್ಷಿ, ದಾಳಿಂಬೆ, ಮಾವು, ಚಿಕ್ಕು (ಸಪೋಟಾ), ಸೀಬೆ ಬೆಳೆಗಳು ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಕಷ್ಟು ಜನಪ್ರಿಯ. ರಾಜ್ಯದ ಬೇರೆ ಜಿಲ್ಲೆಗಳಲ್ಲಿಯೂ ಇವನ್ನು ಬೆಳೆಯಲಾಗುತ್ತದೆ.
ಆದರೆ, ಈ ಮೂರು ಜಿಲ್ಲೆಗಳು ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ಜಿಲ್ಲೆಯ ರೈತ ಮಕ್ಕಳು, ಕಾರ್ಮಿಕರು ಪಟ್ಟಣಕ್ಕೆ ವಿವಿಧ ಕೆಲಸ ಅರಸಿ ಬಂದು ಬಿಡುತ್ತಾರೆ. ವಯಸ್ಸಾದ ತಂದೆ - ತಾಯಿ ಸಕಾಲಕ್ಕೆ ಬೆಳೆದ ಬೆಳೆಗೆ ಔಷಧಿ ಸಿಂಪಡಿಸಲಾಗದೇ ಬೆಳೆಯನ್ನೇ ಬಹುತೇಕ ಸಂದರ್ಭದಲ್ಲಿ ಕಳೆದುಕೊಳ್ಳುತ್ತಿದ್ದಾರೆ.
ಮಕ್ಕಳು ಅಗತ್ಯ ಸಂದರ್ಭದಲ್ಲಿ ಮನೆಯಲ್ಲಿ ಲಭ್ಯ ಇರುವುದಿಲ್ಲ, ಕೂಲಿ ಕಾರ್ಮಿಕರೂ ಕೈಕೊಡುತ್ತಾರೆ. ಈ ಸಂದರ್ಭದಲ್ಲಿ ಉತ್ತಮ ಇಳುವರಿ ಹಾಗೂ ಆದಾಯ ತಂದುಕೊಡುವ ಬೆಳೆಗಳಿಗೆ ಔಷಧ ಸಿಂಪಡಿಸದೇ ಇದ್ದರೆ ಬೆಳೆ ಕೈಕೊಡುತ್ತದೆ. ಮಹಾನಗರದ ಸುತ್ತಲಿನ ಜಿಲ್ಲೆಯ ರೈತರ ಸಮಸ್ಯೆ ಇದೇ ಆಗಿದೆ. ಆದರೆ ಈಗ ಇದಕ್ಕೊಂದು ಪರಿಹಾರ ಕಲ್ಪಿಸುವ ಕಾರ್ಯ ಆಗುತ್ತಿದೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಚಿಕ್ಕಬಳ್ಳಾಪುರ ಮೂಲದ ಸನ್ರೈಸ್ ಆಗ್ರೋ ಇಂಡಿಯಾ ಕಂಪನಿಯ ಮುಖ್ಯಸ್ಥ ಚೌಧರಿ ಎಂಬುವರು ಟ್ರ್ಯಾಕ್ಟರ್ಗೆ ಟ್ಯಾಂಕರ್ ಕೂರಿಸಿ ಅತ್ಯಂತ ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಬೆಳೆಗಳಿಗೆ ಔಷಧ ಸಿಂಪಡಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.
ಚೌಧರಿ ಅವರು ಸ್ವಂತವಾಗಿ ಅಭಿವೃದ್ಧಿಪಡಿಸಿರುವ ವ್ಯವಸ್ಥೆಗೆ ಟ್ರ್ಯಾಕ್ಟರ್ ಮೌಂಟೇನ್ ಸ್ಪ್ರೇ ಹೆಸರು ಇಡಲಾಗಿದೆ. 250, 400, 600 ಮತ್ತು 1000 ಲೀಟರ್ ಟ್ಯಾಂಕ್ ಹೊಂದಿದೆ. ಇದಕ್ಕೆ 5 ವರ್ಷ ಗ್ಯಾರಂಟಿ ನೀಡುತ್ತಾರೆ. ಇಡೀ ಸೆಟ್ಗೆ 2 ವರ್ಷ ವಾರಂಟಿ ಜೊತೆ ಉಚಿತ ಸೇವೆ ನೀಡುತ್ತಾರೆ. ವಿಶೇಷ ಗೇರ್ ಬಾಕ್ಸ್ ಮಾಡಿದ್ದು, ದೇಶದಲ್ಲೇ ಮೊದಲ ಬಾರಿಗೆ ಸಿದ್ಧಪಡಿಸಿದ ಹೆಗ್ಗಳಿಕೆ ಇವರದ್ದು.
ಇದು ಅಲ್ಯುಮೀನಿಯಂ ಬಾಡಿ ಒಳಗೊಂಡಿದೆ. ಸರ್ಕಾರದಿಂದ ಇದಕ್ಕೆ ಸಬ್ಸಿಡಿ ಸಹ ಲಭ್ಯವಿದೆ. ಶೇ.40 ರಷ್ಟು ಸಾಮಾನ್ಯ ವರ್ಗಕ್ಕೆ ಹಾಗೂ ಶೇ.50 ರಷ್ಟು ಎಸ್ಸಿ ಎಸ್ಟಿ ವರ್ಗದವರಿಗೆ ಸಬ್ಸಿಡಿ ಸಿಗುತ್ತದೆ. ಒಂದು ಲಕ್ಷ ರೂ. ವರೆಗೂ ಉಳಿತಾಯ ಮಾಡಬಹುದು.
ಬೆಳೆಗಳಿಗೆ ಸರಳವಾಗಿ ಔಷಧ ಸಿಂಪಡಿಸುವ ಯಂತ್ರ ಈ ಕುರಿತು ಸನ್ ರೈಸ್ ಆಗ್ರೋ ಇಂಡಿಯಾ ಕಂಪನಿಯ ಮುಖ್ಯಸ್ಥ ಚೌಧರಿ ಮಾತನಾಡಿ, ಈ ಯಂತ್ರ ಬಳಕೆಯಿಂದ ಮಾನವ ಬಳಕೆ ಕಡಿಮೆ ಆಗಲಿದೆ. ಔಷಧಿ ಉಳಿತಾಯ, ಸಮ ಪ್ರಮಾಣದಲ್ಲಿ ಔಷಧ ಹಂಚಿಕೆ, ಕೇವಲ ಒಬ್ಬ ಚಾಲಕ ಇದ್ದರೆ ಇದನ್ನು ಬಳಸಬಹುದು. ಒಬ್ಬ ವ್ಯಕ್ತಿಗೆ ಆರು ಎಕರೆ ದ್ರಾಕ್ಷಿ ತೋಟಕ್ಕೆ ಔಷಧ ಸಿಂಪಡಿಸಲು ಒಂದು ದಿನ ಬೇಕು. ಆದರೆ, ಈ ಬ್ಲೋವರ್ ಅರ್ಧ ಗಂಟೆಯಲ್ಲಿ ಆರು ಎಕರೆಗೆ ಔಷಧ ಸಿಂಪಡಿಸುತ್ತದೆ.
ಇದು ರೈತರಿಗೆ ಅನುಕೂಲ ಹಾಗೂ ಕಾರ್ಮಿಕರ ಕೊರತೆಯ ಸಮಸ್ಯೆ ನಿವಾರಿಸುತ್ತದೆ. ನಾವು ಹೊಸ ತಂತ್ರಜ್ಞಾನ ಅಳವಡಿಸಿ ಮೂರು ಸಿಂಪಡಣೆ ನೀಡಿದ್ದೇವೆ. ಹಿಂದೆಲ್ಲಾ ಎರಡು ಮಾತ್ರ ಬರುತ್ತಿತ್ತು. ಈಗ ನಾವು ಸೆರಾಮಿಕ್ ಟಿಪ್ ನೀಡಿದ್ದೇವೆ. ಸ್ವದೇಶಿ ನಿರ್ಮಿತ ಉತ್ಪನ್ನ. ನಮ್ಮ ಪ್ರಕಾರ 25 ವರ್ಷ ಇದು ಬಾಳಿಕೆ ಬರಲಿದೆ ಎಂಬ ವಿಶ್ವಾಸ ಇದೆ ಎನ್ನುತ್ತಾರೆ.
ಇದನ್ನೂ ಓದಿ:ದೊಡ್ಡ ಜಮೀನಿಗೆ ಬೀಜ ಬಿತ್ತನೆ, ಔಷಧ ಸಿಂಪಡಣೆ ಹಾಗೂ ಬೆಳೆ ಸಮೀಕ್ಷೆಗೆ ಒಂದೇ ಡ್ರೋಣ್ನಲ್ಲಿ ಪರಿಹಾರ