ಕರ್ನಾಟಕ

karnataka

ETV Bharat / state

ಹ್ಯಾಕರ್ ಶ್ರೀಕೃಷ್ಣನಿಗಾಗಿ ಯುವಕರನ್ನು ಅಪಹರಿಸಿ ಚಿತ್ರ ಹಿಂಸೆ - ಬಂಧನಕ್ಕೂ ಮುನ್ನ ಆರೋಪಿಗಳ ನಡುವೆ ಒಡಕು

ಹ್ಯಾಕರ್​ ಶ್ರೀಕೃಷ್ಣ ಬಂಧನಕ್ಕೂ‌ ಮುನ್ನ ಡ್ರಗ್ಸ್ ಪ್ರಕರಣದ ಆರೋಪಿಗಳಾದ ಸುನೀಶ್ ಹೆಗ್ಡೆ, ಸುಧೀಶ್ ಗ್ಯಾಂಗ್, ಇಬ್ಬರು ಯುವಕರನ್ನು ಅಪಹರಿಸಿ ಚಿತ್ರಹಿಂಸೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

hacker sri krishna
ಹ್ಯಾಕರ್ ಶ್ರೀಕೃಷ್ಣ

By

Published : Dec 1, 2020, 1:43 AM IST

ಬೆಂಗಳೂರು:ಚೀನಾ ಗೇಮಿಂಗ್ ಆ್ಯಪ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 30ಕ್ಕೂ ಹೆಚ್ಚು ವೆಬ್​ಸೈಟ್ ಹ್ಯಾಕ್ ಮಾಡಿ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿ ಶ್ರೀಕೃಷ್ಣ ಬಂಧನಕ್ಕೂ‌ ಮುನ್ನ ಡ್ರಗ್ಸ್ ಪ್ರಕರಣದ ಆರೋಪಿಗಳಾದ ಸುನೀಶ್ ಹೆಗ್ಡೆ, ಸುಧೀಶ್ ಗ್ಯಾಂಗ್ ಇಬ್ಬರು ಯುವಕರನ್ನು ಅಪಹರಿಸಿ ಚಿತ್ರಹಿಂಸೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಪಹರಣಕ್ಕೆ ಒಳಗಾಗಿದ್ದ ಶಶಾಂಕ್ ಹಾಗೂ ಅಭಿಲಾಷ್ ಕ್ರಮವಾಗಿ ಕುಮಾರಸ್ವಾಮಿ ಪೊಲೀಸ್ ಠಾಣೆ ಹಾಗೂ ಜಯನಗರ ಪೊಲೀಸ್ ಠಾಣೆಗಳಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿವೆ. ಡ್ರಗ್ಸ್ ಪ್ರಕರಣದಲ್ಲಿ ಕೆಂಪೇಗೌಡ ನಗರ ಪೊಲೀಸರು ಬಂಧಿಸುವ ಮನ್ನ ಆರೋಪಿಗಳಾದ ಸುನೀಶ್, ಸುಜಯ್ ಹಾಗೂ ಸಹಚರರು ಹ್ಯಾಕರ್ ಶ್ರೀಕೃಷ್ಣನಿಗಾಗಿ‌ ತಲಾಶ್ ನಡೆಸುತ್ತಿದ್ದರು‌. ಅಲ್ಲದೆ ಶ್ರೀಕೃಷ್ಣ ಹಣ ಕೊಡಬೇಕೆಂದು ಹೇಳಿ ಓಡಾಡುತ್ತಿದ್ದರು. ಹೀಗಾಗಿ ಜಯನಗರದಲ್ಲಿರುವ ಶಶಾಂಕ್ ಮನೆಗೆ ಅಕ್ಟೋಬರ್ 1ರ ರಾತ್ರಿ 1.30ರ ಸಮಯದಲ್ಲಿ ಸುನೀಶ್ ಗ್ಯಾಂಗ್ ತೆರಳಿದೆ. ಈ ವೇಳೆ ಶ್ರೀಕೃಷ್ಣ ನಿಮ್ಮ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾನೆಯೇ? ಎಂದು ಕೇಳಿದ್ದಾರೆ. ಬಳಿಕ ಮಾತನಾಡಬೇಕೆಂದು ಕರೆಯಿಸಿ, ಕಾರಿನಲ್ಲಿ ಕೂರಿಸಿಕೊಂಡು ಸಂಜಯನಗರದ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ಕೈಕಾಲು ಕಟ್ಟಿ ಕೂಡಿಹಾಕಿದ್ದಾರೆ.

ಶ್ರೀಕೃಷ್ಣ ಎಲ್ಲಿದ್ದಾನೆ ತಿಳಿಸುವಂತೆ ಶಶಾಂಕ್​ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಒಂದು ಗತಿ ಕಾಣಿಸುವುದಾಗಿ ಬೆದರಿಕೆ ಹಾಕಿ ಕಳುಹಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಶಾಂಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮನೆ ವಿಳಾಸಕ್ಕೆ ಗಾಂಜಾ ಕಳುಹಿಸುತ್ತೇವೆ...!

ಮತ್ತೊಂದು ಪ್ರಕರಣದಲ್ಲಿ‌‌, ಸರ್ಕಾರಿ ನೌಕರನಾಗಿದ್ದ ಅಭಿಲಾಶ್​ನನ್ನು ಅಪಹರಿಸಿದ್ದಾರೆ. ಕೆಲವೇ ಗಂಟೆಗಳ ಅಂತರದಲ್ಲಿ ಪ್ರತ್ಯೇಕ ಎರಡು ಕಾರುಗಳಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ. ಮಾರ್ಗಮಧ್ಯೆ ಕಾರು ನಿಲ್ಲಿಸಿ, ಶ್ರೀಕೃಷ್ಣ ಎಲ್ಲಿದ್ದಾನೆ ತಿಳಿಸು ಅವನು ಹಣ ಕೊಡದೆ ತಪ್ಪಿಸಿಕೊಂಡಿದ್ದಾನೆ ಎಂದು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದಿದ್ದಾರೆ. ಚಾಕುವಿನಿಂದ ಕೈಬೆರಳು ಕತ್ತರಿಸುವುದಾಗಿ ಬೆದರಿಸಿದ್ದಾರೆ. ಕೃಷ್ಣ ಎಲ್ಲಿದ್ದಾನೆ ಎಂದು ಹೇಳದಿದ್ದರೆ ನಿನ್ನ ಮನೆ ವಿಳಾಸಕ್ಕೆ ಗಾಂಜಾ ಕಳುಹಿಸಿ, ಸರ್ಕಾರಿ ನೌಕರಿಯಿಂದ ತೆಗೆಸುವುದಾಗಿ ಕೊಠಡಿಯೊಂದರಲ್ಲಿ ಕೂಡಿಹಾಕಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ.

ಇಷ್ಟೆ ಅಲ್ಲದೆ, ಮರುದಿನ ಶ್ರೀಕೃಷ್ಣನನ್ನು ಹುಡುಕಬೇಕು ಎಂದು ಕಾರಿನಲ್ಲಿ ನಗರದೆಲ್ಲೆಡೆ ಸುತ್ತಾಡಿಸಿ, ಮಧ್ಯಾಹ್ನ 3 ಗಂಟೆಯಲ್ಲಿ ಜಯನಗರದ ಅಶೋಕ ಪಿಲ್ಲರ್ ಬಳಿ ಬಿಟ್ಟು ಹೋಗಿದ್ದಾರೆ‌ ಎಂದು ಅಭಿಲಾಷ್ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್, ಅವ್ಯವಹಾರ, ಹ್ಯಾಕಿಂಗ್ ಸೇರಿದಂತೆ‌ ಇನ್ನಿತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಗುಂಪಿನಲ್ಲಿ ಶ್ರೀಕೃಷ್ಣ ಒಬ್ಬನಾಗಿದ್ದ. ಈತನನ್ನು ಬಳಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳ ದತ್ತಾಂಶವನ್ನು ಹ್ಯಾಕ್ ಮಾಡಿ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದರು. ‌ಹಣಕಾಸಿನ ವಿಚಾರದಲ್ಲಿ ಸುನೀಶ್ ಶೆಟ್ಟಿ ಗ್ಯಾಂಗ್ ಹಾಗೂ ಶ್ರೀಕೃಷ್ಣ ನಡುವೆ ವೈರತ್ವ ಮೂಡಿತ್ತು.‌ ಅಲ್ಲದೆ‌ ಅಕ್ರಮದಿಂದ ಬಂದ ಹಣ ಹಂಚಿಕೆ ವಿಚಾರದಲ್ಲಿ ವೈಮನಸ್ಸು ಬೆಳೆದಿತ್ತು‌ ಎನ್ನಲಾಗಿದೆ‌. ಸದ್ಯ ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಚಿವರ ಪುತ್ರ ದರ್ಶನ್ ಲಮಾಣಿ ಸೇರಿದಂತೆ 10 ಮಂದಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ABOUT THE AUTHOR

...view details