ಕರ್ನಾಟಕ

karnataka

ETV Bharat / state

ಮುತಾಲಿಕ್ ನಿರ್ಧಾರ ನಾನ್ಯಾಕೆ ಪ್ರಶ್ನಿಸಲಿ, ಕ್ಷೇತ್ರದ ಜನತೆಯೇ ಎಲ್ಲವನ್ನೂ ತೀರ್ಮಾನಿಸಲಿದ್ದಾರೆ: ಸುನೀಲ್ ಕುಮಾರ್ ತಿರುಗೇಟು - ETV Bharath Kannada news

ಬಸವರಾಜ ಬೊಮ್ಮಾಯಿ ಕಾರ್ಕಳದಲ್ಲಿ ಸುನೀಲ್ ಕುಮಾರ್ ಸ್ಪರ್ಧೆ ಬಗ್ಗೆ ಸ್ಪಷ್ಟಪಡಿಸಿದ ನಂತರ ಸ್ವತಃ ಇಂಧನ ಸಚಿವರೇ ಪ್ರತಿಕ್ರಿಯೆ ನೀಡಿ ಕ್ಷೇತ್ರದ ಜನ ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ನೋಡೋಣ ಎಂದಿದ್ದಾರೆ.

Sunil Kumar
ಸುನೀಲ್ ಕುಮಾರ್

By

Published : Feb 4, 2023, 8:38 PM IST

ಬೆಂಗಳೂರು:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ ಅದರಂತೆ ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧಿಸುವ ಕುರಿತು ಕೈಗೊಂಡ ನಿರ್ಧಾರವನ್ನು ನಾನು ಪ್ರಶ್ನಿಸುವುದಿಲ್ಲ, ಕ್ಷೇತ್ರದ ಜನತೆಯೇ ಎಲ್ಲವನ್ನೂ ತೀರ್ಮಾನ ಮಾಡಲಿದ್ದಾರೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್ ಈ ರೀತಿ ಸ್ಪರ್ಧೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಹೊಸದೂ ಅಲ್ಲ. ಪ್ರಮೋದ್ ಮುತಾಲಿಕ್ ಈ ಹಿಂದೆ ಬಿಜೆಪಿಯ ಹಿರಿಯ ನಾಯಕ ಅನಂತಕುಮಾರ್ ವಿರುದ್ಧ ಸ್ಪರ್ಧೆ ಮಾಡಿದ್ದರು. ಈಗ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವರ ವಿರುದ್ಧವೂ ಹಿಂದೆ ಸ್ಪರ್ಧಿಸಿದ್ದರು. ಆದರೆ, ಫಲಿತಾಂಶ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ಕಾರ್ಕಳದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅವರ ಮುಂದಿನ ಆಯ್ಕೆ ಯಾವುದೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಪ್ರಮೋದ್ ಮುತಾಲಿಕ್ ಕಾರ್ಕಳ ಕ್ಷೇತ್ರಕ್ಕೆ ಬಂದು ಹಿಂದುತ್ವದ ಹೆಸರಿನಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ, ನಮ್ಮ ಕ್ಷೇತ್ರದಲ್ಲಿ ಹಿಂದುತ್ವಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗಿಲ್ಲ ಆದರೂ ಅವರು ನನ್ನ ಕ್ಷೇತ್ರದಲ್ಲಿ ಹಿಂದುತ್ವದ ಹೆಸರಿನಲ್ಲಿ ಏಕೆ ಚುನಾವಣೆ ಸ್ಪರ್ಧಿಸಲು ಬಯಸುತ್ತಿದ್ದಾರೆ, ಇದರಿಂದ ಯಾರಿಗೆ ಲಾಭ ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದು ಮುತಾಲಿಕ್​ಗೆ ತಿರುಗೇಟು ನೀಡಿದ್ದಾರೆ.

ಹಿಂದುತ್ವದ ಹೆಸರಿನಲ್ಲಿ ಚುನಾವಣೆ:ಈಗ ಹಿಂದುತ್ವದ ಹೆಸರಿನಲ್ಲಿ ಚುನಾವಣೆಗೆ ನಿಲ್ಲಲು ಹೊರಟಿರುವ ಮುತಾಲಿಕ್ ಆರ್​ಎಸ್​ಎಸ್ ಹಾಗೂ ವಿಶ್ವ ಹಿಂದು ಪರಿಷತ್ ಬಿಟ್ಟು ತಾವೇಕೆ ಹೊರ ಹೋದರು ಎಂಬ ಬಗ್ಗೆ ಮೊದಲು ಉತ್ತರಿಸಲಿ ಎಂದು ಸವಾಲು ಹಾಕಿದ ಸುನೀಲ್ ಕುಮಾರ್, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದಾಗಿದೆ. ಮುತಾಲಿಕ್ ತೆಗೆದುಕೊಂಡಿರುವ ನಿರ್ಧಾರವನ್ನು ನಾನ್ಯಾಕೆ ವಿರೋಧಿಸಲಿ? ಸುನಿಲ್ ಕುಮಾರ್ ಏನು ಎಂಬುದನ್ನು ಕಾರ್ಕಳದ ಜನತೆ ಕಳೆದ ಇಪ್ಪತ್ತು ವರ್ಷದಿಂದ ನೋಡಿದ್ದಾರೆ. ಮುಂದೆಯೂ ಕ್ಷೇತ್ರದ ಜನತೆಯೇ ತೀರ್ಮಾನ ಮಾಡುತ್ತಾರೆ ಎಂದರು.

ಜನರ ಪ್ರಶ್ನೆಗೆ ಉತ್ತರಿಸುತ್ತೇನೆ:ಕಾರ್ಕಳದಲ್ಲಿ ಚುನಾವಣೆಗೆ ನಿಲ್ಲುವುದಾಗಿ ಹೇಳುತ್ತಿರುವ ಪ್ರಮೋದ್ ಮುತಾಲಿಕ್ ಅವರು ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ. ಮುಂದೆಯೂ ಈ ರೀತಿಯಲ್ಲಿ ವೈಯಕ್ತಿಕ ಟೀಕೆ ಮಾಡಬಹುದು ಆದರೆ, ನಾನು ಆ ವಿಚಾರಗಳಿಗೆ ಉತ್ತರ ನೀಡಲು ಹೋಗುವುದಿಲ್ಲ. ನಾನು ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಕಾರ್ಕಳದ ಅಭಿವೃದ್ದಿ ವಿಚಾರದ ಬಗ್ಗೆ ಕಾರ್ಕಳದ ಜನ ಪ್ರಶ್ನಿಸಿದರೆ ಮಾತ್ರ ಉತ್ತರ ನೀಡುತ್ತೇನೆ ಎಂದರು.

ಸಿಎಂ ಸ್ಪಷ್ಟನೆ:ಈ ನಡುವೆ ಮುತಾಲಿಕ್ ಹೇಳಿಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರತಿಕ್ರಿಯೆ ನೀಡಿದ್ದು, ಕಾರ್ಕಳದಿಂದ ಸುನೀಲ್ ಕುಮಾರ್ ಸ್ಪರ್ಧೆಯ ಕುರಿತು ಮಾಹಿತಿ ನೀಡಿದ್ದಾರೆ. ಕಾರ್ಕಳ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಹಾಕುತ್ತೇವೆ. ಕಾರ್ಕಳ ವಿಧಾನ ಸಭಾ ಕ್ಷೇತ್ರದಿಂದ ಸುನಿಲ್ ಕುಮಾರ್ ಮೂರು ಬಾರಿ ಗೆದ್ದು ಬಂದಿದ್ದಾರೆ ಎನ್ನುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಯಾವುದೇ ಕಾರಣಕ್ಕೂ ಸ್ಥಾನ ಬಿಟ್ಟುಕೊಡುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ವಿಜಯಪುರ ಪ್ರವಾಸದಲ್ಲಿರುವ ಸಿಎಂ ಈ ಕುರಿತು ಸ್ಪಷ್ಟೀಕರಣ ನೀಡಿದ್ದು, ಮುತಾಲಿಕ್ ಜೊತೆ ಹೊಂದಾಣಿಕೆ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಇದನ್ನೂ ಓದಿ:ಕಾರ್ಕಳ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹಾಕುತ್ತೇವೆ: ಸಿಎಂ ಬೊಮ್ಮಾಯಿ

ABOUT THE AUTHOR

...view details