ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಜನತೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಪೂರೈಕೆ ಮಾಡುವ ಘೋಷಣೆ ಮಾಡಿದ್ದ ಕಾಂಗ್ರೆಸ್ ವಿರುದ್ಧ ಸದನದ ಹೊರಗೆ ವಾಗ್ದಾಳಿ ನಡೆಸಿದ್ದ ಬಿಜೆಪಿ ಇದೀಗ ಸದನದ ಒಳಗಡೆಯೂ ವಿಷಯ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದೆ. ಉಚಿತ ಘೋಷಣೆ ಮಾಡಿ ವಿದ್ಯುತ್ ಸರಬರಾಜು ಕಂಪನಿಗಳನ್ನು ದಿವಾಳಿ ಮಾಡುವುದಲ್ಲ ಎಂದು ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರಿಗೆ ಹತ್ತು ಹಲವು ಉಚಿತ ಘೋಷಣೆಗಳನ್ನು ಪ್ರಕಟಿಸುವ ಕಾರ್ಯ ಆರಂಭಗೊಂಡಿದ್ದು, ಉಚಿತ ವಿದ್ಯುತ್ ವಿಷಯ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ, ಮಾತಿನ ಸಮರಕ್ಕೆ ವೇದಿಕೆ ಕಲ್ಪಿಸಿದೆ. ಕಾಂಗ್ರೆಸ್ನ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಅಷ್ಟೊಂದು ಹಣ ಹೇಗೆ ಭರಿಸುತ್ತೀರಿ, ಈಡೇರಿಸಲಾಗದ ಭರವಸೆ ಯಾಕೆ ನೀಡುತ್ತೀರಿ ಎಂದು ವಾಗ್ದಾಳಿ ನಡೆಸಿದೆ. ಮುಖ್ಯಮಂತ್ರಿ, ಇಂಧನ ಸಚಿವರಾದಿಯಾಗಿ ಇಡೀ ಸಂಪುಟವೇ ಉಚಿತ ವಿದ್ಯುತ್ ಯೋಜನೆಯನ್ನು ಪ್ರಶ್ನಿಸಿದೆ.
ಇಷ್ಟು ದಿನ ಸದನದ ಹೊರಗೆ ಕಾಂಗ್ರೆಸ್ನ ಉಚಿತ ವಿದ್ಯುತ್ ಭರವಸೆಯನ್ನು ಟೀಕಿಸಿದ್ದ ಇಂಧನ ಸಚಿವ ಸುನೀಲ್ ಕುಮಾರ್ ಇದೀಗ ಸದನದ ಒಳಗಡೆಯೂ ಕಾಂಗ್ರೆಸ್ನ ಫ್ರೀ ಎಲೆಕ್ಟ್ರಿಸಿಟಿ ಸ್ಕೀಮ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಹೆಸರನ್ನಾಗಲಿ ಫ್ರೀ ಯೋಜನೆ ಘೋಷಣೆಯನ್ನಾಗಲೀ ನೇರವಾಗಿ ಪ್ರಸ್ತಾಪಿಸದೇ ಉಚಿತ ವಿದ್ಯುತ್ ಕೊಟ್ಟು ಹೆಸ್ಕಾಂಗಳನ್ನು ದಿವಾಳಿ ಮಾಡೋಕೆ ನಾವು ಸಿದ್ಧರಿಲ್ಲ ಎಂದು ಕಾಂಗ್ರೆಸ್ಗೆ ಟಾಂಗ್ ನೀಡಿದ್ದಾರೆ.
ಉಚಿತ ವಿದ್ಯುತ್ ಯೋಜನೆ ಭರಾಟೆಯಲ್ಲಿ ಹೆಸ್ಕಾಂಗಳು ಸಾಲದ ಕೂಪಕ್ಕೆ ಹೋಗುತ್ತಿವೆ. ನಾವು ಅಧಿಕಾರಕ್ಕೆ ಬರುವ ಮುನ್ನ ಹುಬ್ಬಳ್ಳಿ ಹೆಸ್ಕಾಂ ಮತ್ತು ಕೆಪಿಸಿ ಎರಡು ಕೂಡಾ ಸಾಲದ ಸುಳಿಯಲ್ಲಿ ಇದ್ದವು. ಸಿಎಂ ಹಣ ನೀಡಿ ಸಂಸ್ಥೆ ಉಳಿಸಿದ್ದರು. ಆದರೆ, ಮತ್ತೆ ಉಚಿತ ವಿದ್ಯುತ್ ಕೊಟ್ಟು ಹೆಸ್ಕಾಂಗಳನ್ನು ದಿವಾಳಿ ಮಾಡೋಕೆ ನಾವು ಸಿದ್ಧರಿಲ್ಲ ಎಂದು ಬಿಜೆಪಿ ಉಚಿತ ವಿದ್ಯುತ್ ಘೋಷಣೆ ಮಾಡಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು.