ಸಂಡೇ ಲಾಕ್ಡೌನ್... ನೈಟ್ ಪಾರ್ಟಿ ತಡೆಗೆ ಕರ್ಫ್ಯೂ, ಕ್ವಾರಂಟೈನ್ ಉಲ್ಲಂಘನೆ ತಡೆಗೆ ಟ್ಯಾಗ್ ವ್ಯವಸ್ಥೆ
ರಾಜ್ಯದಲ್ಲಿ ಕೊರೊನಾ ರಣಕೇಕೆ ಹಿನ್ನೆಲೆ ಭಾನುವಾರ ಲಾಕ್ಡೌನ್ಗೆ ತೀರ್ಮಾನ ಮಾಡಲಾಗಿದೆ. ಜೊತೆಗೆ ರಾತ್ರಿ 8 ರಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ ಜಾರಿ ಮಾಡಿದ್ದೇವೆ ಎಂದು ಕೋವಿಡ್ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ನೈಟ್ ಪಾರ್ಟಿ ತಡೆಗೆ ಕರ್ಫ್ಯೂ
ಬೆಂಗಳೂರು:ಈಗಾಗಲೇ ರಾಜ್ಯದಲ್ಲಿ ಲಾಕ್ಡೌನ್ ಮಾಡಲ್ಲ ಅಂತಾ ಸ್ಪಷ್ಟಪಡಿಸಿದ್ದೇವೆ. ಕ್ಲಬ್ಗಳು ಸೇರಿ ರಾತ್ರಿ ಕೆಲಕಡೆ ನೈಟ್ ಪಾರ್ಟಿಗಳು ನಡೆಯುತ್ತಿವೆ. ಆದ್ದರಿಂದ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿ ಮಾಡಿದ್ದೇವೆ ಎಂದು ಕೋವಿಡ್ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ತಾಜ್ ವೆಸ್ಟೆಂಡ್ ಊಟ:ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ರೋಗಿಗಳಿಗೆ ಉತ್ತಮ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ, ಮೂರು ರೀತಿಯ ಆಹಾರ ಪೂರೈಕೆ ಮಾಡಲಾಗುತ್ತದೆ. ಆರೋಗ್ಯವರ್ಧಕ ಆಹಾರ ಪೂರೈಸಲಿದ್ದು, ಕೋವಿಡ್ ರೋಗಿಗಳಿಗೆ ತಾಜ್ ವೆಸ್ಟ್ಂಡ್, ಏಟ್ರಿಯಾ ಹೋಟೆಲ್ ಗಳಿಂದ ಆಹಾರ ಪೂರೈಸಲಾಗುತ್ತಿದೆ. ಚಪಾತಿಗಾಗಿ 8 ಲಕ್ಷ ಮೊತ್ತದ ಯಂತ್ರ ತರಿಸಲಾಗಿದೆ. ಅದರಿಂದ ಗಂಟೆಗೆ 1 ಸಾವಿರ ಚಪಾತಿ ಸಿಗಲಿವೆ. ಹಣ್ಣು, ಜ್ಯೂಸ್, ಎರಡು ರೀತಿಯ ಪಲ್ಯ, ಸಿಹಿಯನ್ನು ಊಟದ ಜೊತೆಗೆ ಕೊಡುತ್ತಿದ್ದೇವೆ. ಕಿಡ್ನಿ ಸಮಸ್ಯೆ ಇರುವ ರೋಗಿಗಳು, ಶುಗರ್ ರೋಗಿಗಳಿಗೂ ಪ್ರತ್ಯೇಕ ಆರೋಗ್ಯ ವರ್ಧಕ ಊಟ ಕೊಡಲಾಗುತ್ತಿದೆ ಎಂದರು. ಎಲ್ಲ ಕೋವಿಡ್ ಬೆಡ್ ಗಳಿಗೂ ನಂಬರ್ ಹಾಕಲಾಗುತ್ತದೆ. ಇನ್ನೆರಡು ದಿನಗಳಲ್ಲಿ ಬೆಡ್ಗಳಿಗೆ ನಿರ್ದಿಷ್ಟ ಸಂಖ್ಯೆ ನಿಗದಿ ಮಾಡುತ್ತಿದ್ದೇವೆ. ಇದರಿಂದ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಖಾಲಿ ಇವೆ ಅಂತ ವಾರ್ ರೂಂಗೆ ತಕ್ಷಣವೇ ಗೊತ್ತಾಗಲಿದೆ ಎಂದು ತಿಳಿಸಿದರು.
ಕ್ವಾರಂಟೈನ್ ವ್ಯಕ್ತಿಗಳ ಕೈಗೆ ಟ್ಯಾಗ್:ಕೊರೊನಾ ರೋಗಿಗಳು ಮತ್ತು ಕ್ವಾರಂಟೈನ್ನಲ್ಲಿರುವವರ ಕೈಗೆ ಟ್ಯಾಗ್ ಕಟ್ಟುತ್ತೇವೆ. ಅವರ ಚಲನವಲನ ತಿಳಿಯಲು, ಹೊರಗೆ ಓಡಾಡದಂತೆ ನಿರ್ಬಂಧಿಸಲು ಟ್ಯಾಗ್ ಸಹಕಾರಿಯಾಗಲಿದೆ. ಒಂದು ವೇಳೆ ಟ್ಯಾಗ್ ಕಟ್ ಮಾಡಲು ಪ್ರಯತ್ನ ಪಟ್ಟರೆ ನಮಗೆ ಅಲಾರಂ ಸೈರನ್ ಬರುತ್ತದೆ. ಬೀಪ್ ಸೌಂಡ್ ಹೊಡೆದುಕೊಳ್ಳುತ್ತದೆ ಇನ್ನು ಕೆಲವೇ ದಿನಗಳಲ್ಲಿ ಟ್ಯಾಗ್ ವ್ಯವಸ್ಥೆ ಸಿದ್ಧವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಎರಡೇ ನಿಮಿಷದಲ್ಲಿ ಕೊರೊನಾ ಪರೀಕ್ಷೆ:ಲಂಗ್ ಕಂಜೆಷನ್ ಟೆಸ್ಟ್ನಲ್ಲಿ ಎರಡೇ ನಿಮಿಷಕ್ಕೆ ರಿಪೋರ್ಟ್ ಬರಲಿದೆ. ನಿನ್ನೆ ಈ ಯಂತ್ರದ ಕಂಪನಿಯವರಿಂದ ಸಿಎಂ ಎದುರು ಡೆಮೋ ನಡೆಯಿತು. ಶೇ.95 ರಷ್ಟು ಪಕ್ಕಾ ಫಲಿತಾಂಶ ಸಿಗಲಿದೆ. ಶೇ.80 ಸಿಕ್ಕಿದರೂ ಸಾಕು, ಈ ಯಂತ್ರದಿಂದ ಆಟೋ ಚಾಲಕರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಪೊಲೀಸರು, ವೈದ್ಯ ಸಿಬ್ಬಂದಿಗೆ ಪರೀಕ್ಷೆ ಮಾಡುತ್ತೇವೆ ಎಂದರು. ನಿನ್ನೆ ಬೆಂಗಳೂರಿನಲ್ಲಿ 596 ಪ್ರಕರಣ ಯಾಕೆ ಪತ್ತೆಯಾಯ್ತು ಅಂತ ಪರಿಶೀಲನೆ ಮಾಡಲಾಗುತ್ತಿದೆ. ಇದರಲ್ಲಿ ಸರ್ಕಾರ ಮುಚ್ಚಿಡುವಂಥದ್ದು ಏನೂ ಇಲ್ಲ. ಯಾಕೆ 596 ಜನರಿಗೆ ಸೋಂಕು ಬಂತು, ಹೇಗೆ ಬಂತು ಅಂತ ಇನ್ನೆರಡು ದಿನಗಳಲ್ಲಿ ಮಾಹಿತಿ ಬಹಿರಂಗವಾಗಲಿದೆ ಎಂದರು.
ಸಮುದಾಯಕ್ಕೆ ಕೊರೊನಾ ಹಬ್ಬಿರುವ ಅನುಮಾನ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶೋಕ್, ಸಮುದಾಯ ಮಟ್ಟದಲ್ಲಿ ಕೊರೊನಾ ಹಬ್ಬಿರುವ ಕುರಿತು ತಜ್ಞರು ವರದಿ ಕೊಡಲಿದ್ದಾರೆ. ಇನ್ನು ಮೂರು ದಿನಗಳಲ್ಲಿ ತಜ್ಞರಿಂದ ವರದಿ ಬರಲಿದೆ. ನಿನ್ನೆಯೂ ಸಿಎಂ ಬಳಿ ತಜ್ಞರು ಈ ಬಗ್ಗೆ ಚರ್ಚಿಸಿದ್ದಾರೆ. ಇಡೀ ಬೆಂಗಳೂರಿನಲ್ಲಿ ಸರ್ವೆ ಮಾಡಿ ತಜ್ಞರು ವರದಿ ಕೊಡಲಿದ್ದಾರೆ ಎಂದು ವಿವರಿಸಿದರು.