ಬೆಂಗಳೂರು :ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕುರಿತು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ಅನ್ನು ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ರದ್ದು ಮಾಡಿದೆ.
ಮುನಿರತ್ನ ದಾಖಲಿಸಿರುವ ದಾವೆಗೆ ಅವರು ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಇದರ ಅನುಪಾಲನೆಯ ಅನ್ವಯ ಸಮನ್ಸ್ ಜಾರಿ ಮಾಡಬೇಕಿತ್ತು. ಆದರೆ, ಹಾಲಿ ಪ್ರಕರಣದಲ್ಲಿ ಅದು ಪಾಲನೆಯಾಗಿಲ್ಲ. ಹೀಗಾಗಿ, ಕೆಂಪಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿರುವುದು ಕಾನೂನುಬಾಹಿರ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಾನ್ಯ ಮಾಡಿದೆ.
ಅಲ್ಲದೆ, 8ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಹೊರಡಿಸಿದ್ದ ಸಮನ್ಸ್ ಅನ್ನು ರದ್ದು ಮಾಡಿದೆ. ಜೊತೆಗೆ, ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ.
ಪ್ರತಿವಾದಿ/ದೂರುದಾರರು ಸಾಕ್ಷಿಗಳ ಪಟ್ಟಿ ಸಲ್ಲಿಸಬೇಕು. ಸಾಕ್ಷಿಗಳು ಇಲ್ಲ ಎಂದಾದರೆ ಅವರು ಮೆಮೊ ಸಲ್ಲಿಸಬೇಕು. ಮೆಮೊ ಸಲ್ಲಿಸಿದ ಬಳಿಕ ಮ್ಯಾಜಿಸ್ಟ್ರೇಟ್ ಅವರು ಹೊಸದಾಗಿ ಎಲ್ಲಾ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ, ಕಾನೂನಿನ ಪ್ರಕಾರ ಮುಂದುವರಿಯಬಹುದಾಗಿದೆ. ಮುಖ್ಯ ಅರ್ಜಿಯನ್ನು ಮಾನ್ಯ ಮಾಡಿರುವುದರಿಂದ ಅರ್ಜಿದಾರರು ಸಲ್ಲಿಸಿರುವ ಮಧ್ಯಂತರ ಅರ್ಜಿಯು ಮಾನ್ಯತೆ ಕಳೆದುಕೊಂಡಿದ್ದು, ಹೀಗಾಗಿ ಅದನ್ನು ತಿರಸ್ಕರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.