ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಘೋಷಿಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಮಲತಾ ಅಂಬರೀಶ್ ಕೃತಜ್ಞತೆ ಸಲ್ಲಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸ ಧವಳಗಿರಿಗೆ ಸುಮಲತಾ ಅಂಬರೀಶ್ ಭೇಟಿ ನೀಡಿದರು. ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು. ಯಡಿಯೂರಪ್ಪ ಕೂಡ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಸುಮಲತಾ ಅವರನ್ನು ಬೆಂಬಲಿಸಲು ಪಕ್ಷ ತೀರ್ಮಾನಿಸಿದೆ ಇಂದು ಸಂಜೆಯೊಳಗೆ ಬಿಜೆಪಿಯ ಬಾಕಿ ಇರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ಕೊಪ್ಪಳದಿಂದ ಸಂಗಣ್ಣ ಕರಡಿಯವರಿಗೆ ಟಿಕೆಟ್ ನೀಡುವುದು ಬಹುತೇಕ ನಿಶ್ಚಿತವಾಗಿದ್ದು, ಬೆಂಗಳೂರು ದಕ್ಷಿಣದ ಟಿಕೆಟ್ ಬಗ್ಗೆಯೂ ಸಂಜೆಯೊಳಗೆ ಇತ್ಯರ್ಥವಾಗುತ್ತದೆ ಎಂದುಮಾಹಿತಿ ನೀಡಿದರು.
ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಸುಮಲತಾ, ಬಿಜೆಪಿ ಬೇಷರತ್ತಾಗಿ ಬೆಂಬಲ ಕೊಟ್ಟಿದೆ. ಯಾವುದೇ ಷರತ್ತನ್ನು ಹಾಕಿಲ್ಲ. ಅಂಬರೀಶ್ ಅವರ ಮೇಲಿನ ಗೌರವದಿಂದ ಬೆಂಬಲ ಕೊಟ್ಟಿರೋದಾಗಿ ಬಿಜೆಪಿ ನಾಯಕರು ಹೇಳಿದ್ದಾರೆ. ಹಾಗಾಗಿ ಚುನಾವಣೆ ಬಳಿಕ ಏನು ಮಾಡಬೇಕು ಎಂಬುದನ್ನ ಮಂಡ್ಯದ ಜನರನ್ನೇ ಕೇಳಿ ತೀರ್ಮಾನ ಮಾಡ್ತೇನೆ. ಚುನಾವಣೆಗೆ ಸ್ಪರ್ಧಿಸಲೂ ಮಂಡ್ಯದೆ ಜನರೇ ಕಾರಣ ಎಂದರು.
ಬೇಷರತ್ ಬೆಂಬಲಕ್ಕೆ ಕೃತಜ್ಞತೆ ದರ್ಶನ್ ಹಾಗೂ ಯಶ್ ರನ್ನು ಕುಮಾರಸ್ವಾಮಿಯವರು ಜೋಡಿ ಕಳ್ಳೆತ್ತು ಎಂದು ನಿಂದಿಸಿರುವುದಕ್ಕೆ ತಣ್ಣನೆ ಪ್ರತಿಕ್ರಿಯೆ ನೀಡಿದ ಸುಮಲತಾ, ಚುನಾವಣೆ ಸಂದರ್ಭದಲ್ಲಿ ಇಂತಹ ಮಾತುಗಳು ಬೇಕಿರಲಿಲ್ಲ. ಯಾರು ಏನೇ ಹೇಳಿದರೂ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ದರ್ಶನ್ ಕೂಡ ಹೇಳಿದ್ದಾರೆ. ದರ್ಶನ್ ಮಂಡ್ಯದ ಜನತೆ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಆಡಿಯೋ ರಿಲೀಸ್ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ನೋಡೋಣ ಅವರು ಏನು ಮಾಡುತ್ತಾರೋ ಮಾಡಲಿ. ಜನ ನಿರ್ಧರಿಸುತ್ತಾರೆ. ಕೆಪಿಸಿಸಿಯಿಂದ ಕೆಲ ಕಾಂಗ್ರೆಸ್ ಕಾರ್ಯಕರ್ತರ ಉಚ್ಛಾಟನೆ ಮಾಡಲಾಗುತ್ತಿದೆ. ಇದೆಲ್ಲ ಮೊದಲೇ ಅವರಿಗೆ ಗೊತ್ತಿತ್ತು. ಹಾಗಾಗಿ ಎಲ್ಲವನ್ನ ಎದುರಿಸಲು ಧೈರ್ಯವಾಗಿದ್ದಾರೆ ಎಂದು ಸುಮಲತಾ ಗುಡುಗಿದರು.