ಬೆಂಗಳೂರು: ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಜೆಡಿಎಸ್ ತೀವ್ರ ಪೈಪೋಟಿ ನಡೆಸಿವೆ. ಸರ್ಕಾರದ ನೆರವಿನೊಂದಿಗೆ ಅಧ್ಯಕ್ಷ ಗಾದಿ ಅಲಂಕರಿಸಲು ಜೆಡಿಎಸ್ ಮುಂದಾಗಿದ್ದರೆ, ಇದಕ್ಕೆ ಅವಕಾಶ ನೀಡದಂತೆ ಸಂಸದೆ ಸುಮಲತಾ ಅಂಬರೀಶ್ ಮೂಲಕ ಕಾಂಗ್ರೆಸ್ ಕೂಡ ಪ್ರಯತ್ನ ನಡೆಸಿದೆ.
12 ಸದಸ್ಯ ಬಲದ ಮಂಡ್ಯ ಡಿಸಿಸಿ ಬ್ಯಾಂಕ್ನಲ್ಲಿ ಕಾಂಗ್ರೆಸ್ 8 ಹಾಗೂ ಜೆಡಿಎಸ್ 4 ಸದಸ್ಯರನ್ನು ಪಡೆದಿವೆ. ಅನಾಯಾಸವಾಗಿ ಅಧ್ಯಕ್ಷಗಾದಿ ಅಲಂಕರಿಸುವ ಕಾಂಗ್ರೆಸ್ ಲೆಕ್ಕಾಚಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಠಕ್ಕರ್ ನೀಡಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ದಕ್ಕಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಕಾರ ಕೋರಿದ್ದಾರೆ. ಇತ್ತೀಚೆಗಷ್ಟೇ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವೇಳೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಬಿಜೆಪಿ ಜೊತೆ ಮೈತ್ರಿಯೊಂದಿಗೆ ಅಧಿಕಾರ ಹಿಡಿಯುವ ಕೋರಿಕೆ ಸಲ್ಲಿಸಿದ್ದರು.
ಜೆಡಿಎಸ್ ಲೆಕ್ಕಾಚಾರವೇನು?
12 ಸದಸ್ಯ ಬಲದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವೇಳೆ ಓರ್ವ ನಾಮನಿರ್ದೇಶಿತ ಸದಸ್ಯ ಮತ್ತು ಇಬ್ಬರು ಅಧಿಕಾರಿಗಳು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ಸಹಜವಾಗಿ ಸರ್ಕಾರದ ಪರವಾಗಿ ಮತ ಚಲಾಯಿಸುತ್ತಾರೆ. ಈ ಮತಗಳು ಜೆಡಿಎಸ್ ಗೆ ಲಭಿಸಿದರೆ ನಾಲ್ಕು ಸದಸ್ಯ ಬಲದ ಜೆಡಿಎಸ್ ಸಂಖ್ಯೆ 7 ಕ್ಕೆ ಹೆಚ್ಚಳವಾಗಲಿದೆ.
ಈಗಾಗಲೇ ಕಾಂಗ್ರೆಸ್‌ನ ಓರ್ವ ಸದಸ್ಯ ಜೆಡಿಎಸ್ ತೆಕ್ಕೆಯಲ್ಲಿದ್ದು, ಜೆಡಿಎಸ್ ಸದಸ್ಯರ ಜೊತೆ ಪ್ರವಾಸದಲ್ಲಿದ್ದಾರೆ ಎನ್ನಲಾಗಿದೆ. ಅವರ ಮತ ಸೇರಿದರೆ ಜೆಡಿಎಸ್ ಸಂಖ್ಯೆ 8 ಕ್ಕೆ ಹೆಚ್ಚಳವಾಗಲಿದ್ದು, 8 ಸದಸ್ಯ ಬಲದ ಕಾಂಗ್ರೆಸ್ 7 ಕ್ಕೆ ಕುಸಿಯಲಿದೆ ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇರಿಸುವ ಲೆಕ್ಕಾಚಾರವನ್ನು ಕುಮಾರಸ್ವಾಮಿ ಹಾಕಿದ್ದಾರೆ. ಆದರೆ, ಕುಮಾರಸ್ವಾಮಿ ತಂತ್ರಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ಸಂಸದೆ ಸುಮಲತಾ ಅಂಬರೀಶ್ ಮೂಲಕ ಸರ್ಕಾರದ ಸಹಕಾರ ಪಡೆಯಲು ಮುಂದಾಗಿದೆ.
ಇಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ಸಮಾಲೋಚನೆ ನಡೆಸಿದರು. ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕುರಿತು ಚರ್ಚೆ ನಡೆಸಿದರು. ಯಾವ ಕಾರಣಕ್ಕೂ ಜೆಡಿಎಸ್‌ಗೆ ಬೆಂಬಲ ನೀಡಬಾರದು. ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಲಭಿಸಲು ಸಹಕರಿಸಬೇಕು, ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಸಿಎಂ ಭೇಟಿ ಬಳಿಕ ಮಾತನಾಡಿದ ಸುಮಲತಾ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾನು ಯಾರ ಹೆಸರನ್ನೂ ಸೂಚಿಸಲ್ಲ. ಆದರೆ, ರೈತರ ಸಮಸ್ಯೆಗೆ ಸ್ಪಂದಿಸುವವರಿಗೆ ಬೆಂಬಲ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ. ಯಾವುದೇ ಪಕ್ಷದ ಪರ ಮಾತನಾಡಲು ಇಚ್ಚಿಸುವುದಿಲ್ಲ ಎಂದು ತಿಳಿಸಿದರು.
ಆಪರೇಷನ್ ಜೆಡಿಎಸ್ ಮೂಲಕ ಕಾಂಗ್ರೆಸ್‌ನ ಓರ್ವ ಸದಸ್ಯ ಅಶ್ವತ್ಥ್ ರನ್ನು ಸೆಳೆದಿರುವ ಕುಮಾರಸ್ವಾಮಿ, ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಯಡಿಯೂರಪ್ಪ ಸಹಕಾರ ಕೋರಿ ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ. ಇದಕ್ಕೆ ಪ್ರತ್ಯಸ್ತ್ರವಾಗಿ ಸುಮಲತಾರನ್ನು ಕಾಂಗ್ರೆಸ್ ಬಳಸಿಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್..ಯಡಿಯೂರಪ್ಪ ಯಾರಿಗೆ ಸಹಕಾತ ನೀಡಲಿದ್ದಾರೆ, ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಯಾರಿಗೆ ಲಭಿಸಲಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ .