ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಟಿಕೆಟ್ ಮುಗಿದ ಅಧ್ಯಾಯ,18 ರಂದು ನನ್ನ ನಿರ್ಧಾರ ಪ್ರಕಟ: ಸುಮಲತಾ - Sumalatha ambarish

ಕಾಂಗ್ರೆಸ್ ಟಿಕೆಟ್ ಮುಗಿದ ಅಧ್ಯಾಯ. ಮಾ.18 ರಂದು ನನ್ನ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದೇನೆ. ಅದಕ್ಕೂ ಮುನ್ನ ಹಿರಿಯ ನಾಯಕ ಎಸ್.ಎಂ ಕೃಷ್ಣ ಅವರ ಆಶೀರ್ವಾದ ಪಡೆದಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು.

ಸುಮಲತಾ ಅಂಬರೀಶ್

By

Published : Mar 15, 2019, 2:51 PM IST

ಬೆಂಗಳೂರು: ಸುಮಲತಾ ಅಂಬರೀಶ್​ಗೆ ಕಾಂಗ್ರೆಸ್​ ಟಿಕೆಟ್​ ನೀಡುತ್ತೆ, ಮಂಡ್ಯದಲ್ಲಿ ಸುಮಲತಾರನ್ನು ಕಾಂಗ್ರೆಸ್​ ಬೆಂಬಲಿಸುತ್ತೆ ಅನ್ನೋ ಭರವಸೆಗೆ ಎಳ್ಳುನೀರು ಬಿಟ್ಟಂತಾಗಿದೆ. ಹೀಗಾಗಿ ಮಂಡ್ಯ ಕದನ ಕಣ ಮತ್ತಷ್ಟು ರಂಗೇರಿದೆ.

ಹೌದು, ಕಾಂಗ್ರೆಸ್ ಟಿಕೆಟ್ ಮುಗಿದ ಅಧ್ಯಾಯ. ಮಾ.18 ರಂದು ನನ್ನ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದೇನೆ. ಅದಕ್ಕೂ ಮುನ್ನ ಹಿರಿಯ ನಾಯಕ ಎಸ್.ಎಂ ಕೃಷ್ಣ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು.

ಸದಾಶಿವನಗರದಲ್ಲಿರುವ ಎಸ್.ಎಂ ಕೃಷ್ಣ ನಿವಾಸ ಶಾಂಭವಿ ನಿಲಯಕ್ಕೆ ಸುಮಲತಾ ಅಂಬರೀಶ್ ಭೇಟಿ ನೀಡಿ ಬಿಜೆಪಿ ಹಿರಿಯ ನಾಯಕ ಎಸ್.ಎಂ ಕೃಷ್ಣ ಅವರ ಆಶೀರ್ವಾದ ಪಡೆದರು. ಕೆಲಕಾಲ ಮಾತುಕತೆ ನಡೆಸಿ ಪ್ರಸಕ್ತ ಮಂಡ್ಯ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು. ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿ, ಬಿಜೆಪಿಯಿಂದ ಅಭ್ಯರ್ಥಿ ಕಣಕ್ಕಿಳಿಸದೇ ಇದ್ದರೆ ತಮ್ಮ ಪರ ಪ್ರಚಾರಕ್ಕೆ ಆಗಮಿಸುವಂತೆ ಮನವಿ ಮಾಡಿದರು ಎಂದು ತಿಳಿದು ಬಂದಿದೆ.

ಸುಮಲತಾ ಅಂಬರೀಶ್

ಎಸ್.ಎಂ ಕೃಷ್ಣ ಭೇಟಿ ಬಳಿಕ ಮಾತನಾಡಿದ ಅವರು, ಎಸ್.ಎಂ ಕೃಷ್ಣ ನಮ್ಮ ಹಿರಿಯ ನಾಯಕರು. ಅವರ ಆಶೀರ್ವಾದ ಪಡೆದು ಮಂಡ್ಯದ ವಸ್ತುಸ್ಥಿತಿಯನ್ನು ಅವರಿಗೆ ವಿವರಿಸಿದ್ದೇನೆ. ಕೃಷ್ಣರ ಆಶೀರ್ವಾದ ಪಡೆದರೆ ಒಳ್ಳೆಯದಾಗಲಿದೆ ಎನ್ನುವ ನಂಬಿಕೆಯಿದೆ. ಅವರಲ್ಲಿ ಬಹಳ ಗೌರವ , ಪ್ರೀತಿಯನ್ನು ನಮ್ಮ ಇಡೀ ಕುಟುಂಬ ಇಟ್ಟುಕೊಂಡಿದೆ. ಹಾಗಾಗಿ ಅವರನ್ನು ಭೇಟಿ ಮಾಡುವುದು ನನ್ನ ಕರ್ತವ್ಯವಾಗಿತ್ತು ಎಂದರು.

ಇಂದು ನನ್ನ ಅನಿಸಿಕೆಯನ್ನು ಅವರಿಗೆ ತಿಳಿಸಿದ್ದೇನೆ. ಇದೇ 18 ಕ್ಕೆ ನಾನು ನಿರ್ಧಾರವನ್ನು ಪ್ರಕಟಿಸಲಿದ್ದೇನೆ. ಇಂದು ಕೇವಲ ಕೃಷ್ಣ ಅವರ ಆಶೀರ್ವಾದ ಮಾತ್ರ ಪಡೆದಿದ್ದೇನೆ. ಯಡಿಯೂರಪ್ಪ ಸೇರಿದಂತೆ ಯಾರನ್ನೂ ಟಿಕೆಟ್ ವಿಷಯಕ್ಕೆ ಭೇಟಿ ಮಾಡಿಲ್ಲ. ಆದರೆ ಹಿರಿಯ ನಾಯಕರ ಆಶೀರ್ವಾದ ಪಡೆಯಲಿದ್ದೇನೆ ಎಂದರು.

ನನಗೆ ಬೆಂಬಲ ಕೊಡಿವುದಾಗಿ ಅಧಿಕೃತವಾಗಿ ಯಾರೂ ಹೇಳಿಲ್ಲ. ಇಂದಿನ ಸ್ಥಿತಿಯಲ್ಲಿ ಎಲ್ಲರ ಬೆಂಬಲದ ಅಗತ್ಯವಿದೆ. ಗೆಲುವು, ಸೋಲು ನಂತರದ್ದು. ಆದರೆ ಒಳ್ಳೆಯ ಉದ್ದೇಶ ಇಟ್ಟುಕೊಂಡು ಪ್ರಚಾರ ಆರಂಭಿಸಬೇಕು. ಒಳ್ಳೆಯ ರೀತಿ‌ ಪ್ರಚಾರ ನನ್ನ ಆಸೆ ಎಂದು ಜೆಡಿಎಸ್ ವಿರುದ್ಧ ಪರೋಕ್ಷವಾಗಿ ಸುಮಲತಾ ಕಿಡಿಕಾರಿದರು.

ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ‌ ಕೊಂಡೊಯ್ಯುವ ವಿಷಯದಲ್ಲಿ ನನ್ನ ಜೊತೆ ಯಾರೂ ಮಾತನಾಡಿರಲಿಲ್ಲ. ಅಂಬರೀಶ್ ಹೆಸರನ್ನು ಎಲ್ಲರೂ ಬಳಸಿಕೊಳ್ಳುವ ಸನ್ನಿವೇಶ ಇದೆ. ಯಾರೇ ಆಗಲಿ, ಪದೇ ಪದೇ ಅಂಬರೀಶ್ ಮತ್ತು ನನ್ನ ಹೆಸರು ತರದೇ ಇರೋದು ಒಳ್ಳೆಯದು ಎಂದು ಸುಮಲತಾ ಇದೇ ವೇಳೆ ಹೇಳಿದರು.

ಜೆಡಿಎಸ್ ಟಿಕೆಟ್ ಕೊಡಲು ಸಿದ್ದವಿದ್ದೆವು ಎನ್ನುವ ಸಚಿವ ಡಿ ಸಿ ತಮ್ಮಣ್ಣ ಹೇಳಿಕೆ ಸುಳ್ಳು. ನನಗೆ ಯಾವುದೇ ಆಹ್ವಾನ ಬಂದಿಲ್ಲ. ಅನುಕಂಪದ ಲಾಭಕ್ಕೆ ಯಾರು ಬೇಕಾದರೂ ಯತ್ನಿಸಬಹುದು. ಇದನ್ನೆಲ್ಲಾ ನಾನು ಎದುರಿಸುತ್ತೇನೆ. ಪಾಠ ಕಲಿಯಲಿದ್ದೇನೆ. ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದರಲ್ಲಿ ತಪ್ಪಿಲ್ಲ. ಆದರ ಇದನ್ನೆಲ್ಲ ಕೇಳಿ ಅವರ ಬಳಿ ಹೋಗುವುದು ಸರಿಯಲ್ಲ ಎಂದರು.

ನಂತರ ಎಸ್.ಎಂ ಕೃಷ್ಣ ಮಾತನಾಡಿ, ಈಗ ಸುಮಲತಾ ಚುನಾವಣೆಗೆ ನಿಲ್ಲುವ ಪ್ರಸ್ತಾಪ ಮಾಡಿದ್ದಾರೆ. ನಾನು ಬಿಜೆಪಿ ವರಿಷ್ಠರ ಜೊತೆ ಮಾತನಾಡುತ್ತೇನೆ. ಈಗಾಗಲೇ ಸುಮಲತಾ 18 ರಂದು ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ. ಆ ಹೊತ್ತಿಗಾಗಲೇ ಬಿಜೆಪಿ ಮಂಡ್ಯದಲ್ಲಿ ಅಭ್ಯರ್ಥಿ ನಿಲ್ಲಿಸಬೇಕಾ ಅಥವಾ ಸುಮಲತಾಗೆ ಬೆಂಬಲ ಘೋಷಣೆ ಮಾಡುತ್ತಾರಾ ಅನ್ನುವ ನಿರ್ಧಾರ ಕೈಗೊಳ್ಳಲಿದೆ ಎಂದರು.

ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಹಾಕಬೇಕು ಎನ್ನುವ ಬೇಡಿಕೆ ಇದೆ. ಅದನ್ನು ಕಡೆಗಣಿಸುವಂತಿಲ್ಲ. ಆದರೂ ಒಟ್ಟಾರೆಯಾಗಿ ಬಿಜೆಪಿ ನಿರ್ಧಾರ ತೆಗೆದುಕೊಳ್ಳಲಿದೆ. ವ್ಯಕ್ತಿಗತ ವಿಷಯ ಚರ್ಚೆ ಬೇಡವೆಂದು ಸುಮಲತಾ ಹೇಳಿದ್ದಾರೆ. ಅದನ್ನು ಒಪ್ಪುತ್ತೇನೆ. ಎಸ್.ಎಂ ಕೃಷ್ಣ ಬೇರೆಯಲ್ಲ, ಬಿಜೆಪಿ ಬೇರೆಯಲ್ಲ. ಈಗಾಗಲೇ ಕೃಷ್ಣ ಬಿಜೆಪಿಯಲ್ಲಿ ಸೇರಿ ಹೋಗಿದ್ದಾರೆ. ಪಕ್ಷದ ನಿರ್ಧಾರವೇ ನನ್ನ ನಿರ್ಧಾರ, ಸುಮಲತಾ ಬೆಂಬಲ ಸಂಬಂಧ ಪಕ್ಷ ಕೈಗೊಳ್ಳುವ ತೀರ್ಮಾನವೇ ನನ್ನ ತೀರ್ಮಾನವೂ ಆಗಿರಲಿದೆ ಎಂದು ಹಿರಿಯ ನಾಯಕ ಸ್ಪಷ್ಟಪಡಿಸಿದರು.

ABOUT THE AUTHOR

...view details