ಕರ್ನಾಟಕ

karnataka

ETV Bharat / state

ಹೆಚ್​ಡಿಕೆ ಕದನ ವಿರಾಮ ಘೋಷಿಸಿದರೂ.. ಸಂಸದೆ ಸುಮಲತಾ ಅಂಬಿ ಹೋರಾಟ ಕೈಬಿಟ್ಟಂತಿಲ್ಲ.. - ಸುಮಲತಾ ಅಂಬರೀಶ್ ಲೇಟೆಸ್ಟ್ ನ್ಯೂಸ್

ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಆಲೋಚನಾ ಶಕ್ತಿ ಸಾಕು. ಪತ್ರಕರ್ತರಿಗೆ ಮತ್ತು ಸಾಮಾನ್ಯ ಜನಕ್ಕೆ ಅರ್ಥ ಆಗುವ ವಿಷಯ ಕೆಲವು ರಾಜಕಾರಣಿಗಳಿಗೆ ಅರ್ಥವಾಗದೇ ಇರುವುದು ಸೋಜಿಗ ಎಂದು ತಮ್ಮ ಫೇಸ್​ಬುಕ್​​ ಪೇಜ್​ನಲ್ಲಿ ಸುಮಲತಾ ಬರೆದುಕೊಂಡಿದ್ದಾರೆ. ಯಾವುದೇ ಕ್ಷೇತ್ರವಿರಲಿ ಮಹಿಳೆಯರನ್ನು ಗೌರವಿಸಿ, ನೀಚ ರಾಜಕಾರಣವನ್ನು ನಿಲ್ಲಿಸಿ ಎಂಬುದನ್ನು ಹೇಳುತ್ತಲೇ ಬರುತ್ತಿದ್ದಾರೆ..

kumaraswamy - sumalatha
ಕುಮಾಸ್ವಾಮಿ - ಸುಮಲತಾ

By

Published : Jul 13, 2021, 1:05 PM IST

ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೌನವಾದ ನಂತರವೂ ಸಂಸದೆ ಸುಮಲತಾ ಅಂಬರೀಶ್ ಅನಗತ್ಯವಾಗಿ ಕೆಣಕುವ ಕಾರ್ಯ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುತ್ತಿದ್ದು, ಸದ್ಯಕ್ಕೆ ಆಕ್ರೋಶ ನಿಲ್ಲುವಂತೆ ಕಾಣುತ್ತಿಲ್ಲ.

ಮಂಡ್ಯ ಜಿಲ್ಲಾ ಅಭಿವೃದ್ಧಿ, ಜೆಡಿಎಸ್ ಶಾಸಕರ ವಿಚಾರದಲ್ಲಿ ಸಂಸದರು ನಡೆದುಕೊಳ್ಳುತ್ತಿರುವ ವಿಚಾರ, ಕೆಆರ್​ಎಸ್​ ಅಣೆಕಟ್ಟು ಹಾಗೂ ಗಣಿಗಾರಿಕೆ ಲಂಚ ಸ್ವೀಕಾರ ಇತ್ಯಾದಿ ವಿಚಾರದ ಮೇಲೆ ಕಳೆದ ಎರಡು ವಾರದಿಂದ ಮಾಜಿ ಸಿಎಂ ಹೆಚ್ ಡಿ ಕುಮಾಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಡುವೆ ತೀವ್ರ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಆದರೆ, ನಾಲ್ಕು ದಿನದ ಹಿಂದೆ ಟ್ವೀಟ್ ಮಾಡಿ ಹೆಚ್​ಡಿಕೆ ಕದನ ವಿರಾಮ ಘೋಷಿಸಿದ್ದರು.

ಕಾರ್ಯಕರ್ತ ಬಂಧುಗಳೇ, ಅಭಿಮಾನಿ ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ ನಾವು ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ. ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ.

ಪ್ರಾದೇಶಿಕ ಪಕ್ಷವಾಗಿ ನಾವು ಮಾತಾಡುವುದಿದ್ದು, ಮಾತಾಡೋಣ. ಪ್ರಾದೇಶಿಕ ವಿಚಾರಗಳು ಇತ್ತೀಚೆಗೆ ಗೌಣವಾಗುತ್ತಿವೆ, ಅದರ ಬಗ್ಗೆ ಮಾತಾಡೋಣ. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ನಾವು ದೊಡ್ಡದಾಗಿ ಕೂಗಿ ಹೇಳೋಣ. ಪ್ರಾದೇಶಿಕ ಅಸ್ಮಿತೆಯ ವಿಚಾರವನ್ನು ಜನರೊಂದಿಗೆ ಪ್ರಸ್ತಾಪಿಸೋಣ. ಆದರೆ, ಅನಗತ್ಯ ಮಾತು ಅನಗತ್ಯವಷ್ಟೇ ಎಂದು ಹೇಳಿಕೆ ನೀಡಿ ಸುಮ್ಮನಾಗಿರುವ ಕುಮಾರಸ್ವಾಮಿ ಪಕ್ಷದ ರಾಜಕೀಯ ಚಟುವಟಿಕೆ ಹಾಗೂ ಕಾರ್ಯಕರ್ತರ ಭೇಟಿಗೆ ಸೀಮಿತವಾಗಿದ್ದಾರೆ.

ಆದರೆ, ಸುಮಲತಾ ಅವರ ಆಕ್ರೋಶ ನಿಲ್ಲುವಂತೆ ಕಾಣಿಸುತ್ತಿಲ್ಲ. ಜುಲೈ 10ರಂದೇ ಹೆಚ್​ಡಿಕೆ ಕದನ ವಿರಾಮ ಘೋಷಿಸಿದ್ದರೂ, ಸುಮಲತಾ ಅಂಬರೀಶ್ ಮಾತ್ರ ಈಗಲೂ ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮುಂದೆ ವ್ಯಕ್ತಪಡಿಸುತ್ತಲೇ ಇದ್ದಾರೆ.

ಸಮರ ಮುಂದುವರಿಕೆ :ಮುಂದುವರೆದು ಟ್ವೀಟ್ ಮಾಡಿರುವ ಸಂಸದೆ ಸುಮಲತಾ ಅಂಬರೀಶ್, ಶುಭೋದಯ ನಾಡಿನ ಹಿರಿಯ ಕನ್ನಡ ಕವಿಗಳು ಬಹು ಹಿಂದೆಯೇ ಹಾಡಿದರು "ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಕುಗ್ಗದೆಯೆ ಜಗ್ಗದೆಯೇ ನುಗ್ಗಿ ನಡೆ ಮುಂದೆ" ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಕೆಲವರು ಮಹಿಳೆಯರು ಅಧಿಕಾರದಲ್ಲಿರುವುದನ್ನು ಸಹಿಸಿಕೊಳ್ಳಲಾರರು.

ಭ್ರಷ್ಟರು, ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ, ಒತ್ತಡ, ಕಿರುಕುಳ ಕೊಡಬಲ್ಲರು. ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರುವುದಿಲ್ಲ! ಎಂದು ಹೇಳುವ ಮೂಲಕ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆಯನ್ನು ಪ್ರಸ್ತಾಪಿಸಿ ಅಣಕಿಸುವ ಕಾರ್ಯ ಮಾಡಿದ್ದಾರೆ.

ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಆಲೋಚನಾ ಶಕ್ತಿ ಸಾಕು. ಪತ್ರಕರ್ತರಿಗೆ ಮತ್ತು ಸಾಮಾನ್ಯ ಜನಕ್ಕೆ ಅರ್ಥ ಆಗುವ ವಿಷಯ ಕೆಲವು ರಾಜಕಾರಣಿಗಳಿಗೆ ಅರ್ಥವಾಗದೇ ಇರುವುದು ಸೋಜಿಗ ಎಂದು ತಮ್ಮ ಫೇಸ್​ಬುಕ್​​ ಪೇಜ್​ನಲ್ಲಿ ಸುಮಲತಾ ಬರೆದುಕೊಂಡಿದ್ದಾರೆ. ಯಾವುದೇ ಕ್ಷೇತ್ರವಿರಲಿ ಮಹಿಳೆಯರನ್ನು ಗೌರವಿಸಿ, ನೀಚ ರಾಜಕಾರಣವನ್ನು ನಿಲ್ಲಿಸಿ ಎಂಬುದನ್ನು ಹೇಳುತ್ತಲೇ ಬರುತ್ತಿದ್ದಾರೆ. ಹೌದು, ಇದು ನಿಲ್ಲುವುದು ಯಾವಾಗ? ದಿ ವೀಕ್ ಪತ್ರಿಕೆಯ ಪ್ರಶ್ನೆಯೂ ಅದೇ ಆಗಿದೆ ಎಂದು ಕೂಡ ಬರೆದುಕೊಂಡಿದ್ದರು.

ಇದಲ್ಲದೇ ನಿರಂತರವಾಗಿ ಮಾಧ್ಯಮಗಳ ಮುಂದೆ ಬಂದು ಕುಮಾರಸ್ವಾಮಿ ಹಾಗೂ ಮಂಡ್ಯದ ಜೆಡಿಎಸ್ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಸುಮಲತಾ ವಿರುದ್ಧ ಆಡಿಯೋ, ಸಿಡಿ ಇದೆ ಎಂದೆಲ್ಲ ಹೇಳಿಕೆ ನೀಡಿದ್ದ ಕುಮಾರಸ್ವಾಮಿ, ಏಕಾಏಕಿ ಸುಮ್ಮನಾಗಿದ್ದಾರೆ. ಆದರೆ, ಇದೇ ವಿಚಾರವಿಟ್ಟು ಹೋರಾಟಕ್ಕೆ ಇಳಿದಿರುವ ಸುಮಲತಾ ಅವರು ಇನ್ನೂ ಕದನ ವಿರಾಮ ಘೋಷಿಸಿಲ್ಲ. ರಾಜಕೀಯ ನಾಯಕರಿಬ್ಬರ ನಡುವಿನ ತಿಕ್ಕಾಟ ಗಮನಿಸಿದಾಗ ರಾಜಕಿಯೇತರ ಕಾರಣಗಳೂ ಈ ಅಸಹನೆ ಹಿಂದೆ ಇದೆಯೇನೋ ಎನ್ನುವ ಅನುಮಾನ ಮೂಡುವುದು ಸುಳ್ಳಲ್ಲ.

ABOUT THE AUTHOR

...view details