ಕರ್ನಾಟಕ

karnataka

ETV Bharat / state

ನ.28ರಂದು ಸುಕೇಶ್ ಚಂದ್ರಶೇಖರ್ ಐಷಾರಾಮಿ ಕಾರುಗಳ ಹರಾಜು - ​ ETV Bharat Karnataka

Sukesh Chandrasekhar luxury car auction: ಬಹುಕೋಟಿ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ ಹಲವು ವಾಹನಗಳನ್ನು ಆದಾಯ ತೆರಿಗೆ ಇಲಾಖೆಯು ತಮಿಳುನಾಡು, ಕೇರಳ ಸೇರಿದಂತೆ ನಾನಾ ಕಡೆ ವಶಪಡಿಸಿಕೊಂಡಿತ್ತು.

ಐಷಾರಾಮಿ ಕಾರುಗಳ ಹರಾಜು
ಐಷಾರಾಮಿ ಕಾರುಗಳ ಹರಾಜು

By ETV Bharat Karnataka Team

Published : Nov 23, 2023, 12:32 PM IST

ಬೆಂಗಳೂರು: ಬಹುಕೋಟಿ ತೆರಿಗೆ ವಂಚನೆ ಆರೋಪ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಉದ್ಯಮಿ ಸುಕೇಶ್ ಚಂದ್ರಶೇಖರ್​ಗೆ ಸೇರಿದ ದುಬಾರಿ ಬೆಲೆಯ ಕಾರುಗಳನ್ನು ನವೆಂಬರ್ 28ರಂದು ಆದಾಯ ತೆರಿಗೆ ಇಲಾಖೆಯು(ಐಟಿ) ಹರಾಜು ಹಾಕಲು ಮುಂದಾಗಿದೆ. ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಸುಕೇಶ್ ಚಂದ್ರಶೇಖರ್ ಇದೀಗ ದೆಹಲಿ ಕಾರಾಗೃಹದಲ್ಲಿದ್ದಾರೆ.

ಹಲವು ಸಂಸ್ಥೆಗಳಿಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಕೇಶ್ ಅವರನ್ನು ಐಟಿ ಅಧಿಕಾರಿಗಳು ಈ ಹಿಂದೆ ಬಂಧಿಸಿದ್ದರು. ಸುಮಾರು 308 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಗಂಭೀರ ಆರೋಪ ಸುಕೇಶ್ ಮೇಲಿದೆ. ಹೀಗಾಗಿ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿರುವ ಸ್ವತ್ತುಗಳ ಹರಾಜಿಗೆ ಮುಂದಾಗಿದ್ದಾರೆ.

ವಶಕ್ಕೆ ಪಡೆದ ವಾಹನಗಳ ಪೈಕಿ 12 ಐಷಾರಾಮಿ ಕಾರುಗಳಿವೆ. ಈ ಪೈಕಿ ಬಿಎಂಡ್ಲ್ಯೂ, ರೇಂಜ್ ರೋವರ್, ಜಾಗ್ವಾರ್, ಪೋರ್ಷೆ, ಬೆಂಟ್ಲಿ, ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಡುಕಾಟಿ ಡಿಯಾವೆಲ್ ಸೇರಿದಂತೆ ಹಲವು ಕಾರುಗಳಿವೆ. ಇವುಗಳನ್ನು ಇಲಾಖೆ ಹರಾಜು ಮಾಡಲಿದೆ.

ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿಯ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವಂಚಿಸಿರುವ ಆರೋಪವನ್ನು ಸುಕೇಶ್ ಎದುರಿಸುತ್ತಿದ್ದಾರೆ. ಔಷಧ ಕಂಪನಿ ಪ್ರವರ್ತಕರಿಗೆ ಜಾಮೀನು ಕೊಡಿಸುವುದಾಗಿ ನಂಬಿಸಿ ಅವರ ಪತ್ನಿಯರಿಂದ 200 ಕೋಟಿ ರೂಪಾಯಿ ಪಡೆದು ವಂಚಿಸಿರುವ ಅಕ್ರಮ ಹಣ ವರ್ಗಾವಣೆ ಕುರಿತಂತೆ ಜಾರಿ ನಿರ್ದೇಶಾನಾಲಯ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

2012ರಿಂದ 2018ರವರೆಗಿನ ಅವಧಿಗೆ ಸಂಬಂಧಿಸಿದಂತೆ 308.48 ಕೋಟಿ ರೂ.ಯನ್ನು ಸುಕೇಶ್ ಬಾಕಿ ಇರಿಸಿಕೊಂಡಿದ್ದರು. ಈ ಹಣ ವಸೂಲಿಗಾಗಿ ಅವರ ಕಾರುಗಳನ್ನು ಹರಾಜು ಮಾಡಲಾಗುತ್ತಿದೆ. ತಮಿಳುನಾಡು, ಕೇರಳ ಸೇರಿದಂತೆ ವಿವಿಧೆಡೆ ವಶಪಡಿಸಿಕೊಂಡ ವಾಹನಗಳನ್ನು ಬೆಂಗಳೂರಿಗೆ ತಂದು, ಆದಾಯ ತೆರಿಗೆ ಕಚೇರಿಯಲ್ಲಿ ಇರಿಸಲಾಗಿದೆ.

ಅಯೋಧ್ಯೆ ಶ್ರೀರಾಮನಿಗೆ ಚಿನ್ನದ ಕಿರೀಟ- ಪತ್ರ ಬರೆದಿದ್ದ ಸುಕೇಶ್: ಕೆಲವು ದಿನಗಳ ಹಿಂದೆ ಸುಕೇಶ್, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥರಿಗೆ ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಚಿನ್ನದ ಕಿರೀಟ ನೀಡಲು ಬಯಸುತ್ತಿರುವುದಾಗಿ ಎರಡು ಪುಟಗಳ ಪತ್ರ ಬರೆದಿದ್ದರು. ಪತ್ರದಂತೆ, 916.24 ಕ್ಯಾರೆಟ್​ ಚಿನ್ನದಿಂದ ಮಾಡಲ್ಪಟ್ಟ, ಸುಮಾರು 11 ಕಿ.ಗ್ರಾಂ ತೂಕವಿರುವ ಕಿರೀಟವನ್ನು ಅಯೋಧ್ಯೆಗೆ ನೀಡಲಿದ್ದಾರೆ. ಈ ಕಿರೀಟವು 101 ವಜ್ರಗಳಿಂದ ಕೂಡಿದೆ. ಒಂದೊಂದು ವಜ್ರ 5 ಕ್ಯಾರೆಟ್​ ತೂಕವಿದೆ. ಅಲ್ಲದೇ, ಕಿರೀಟದ ಮಧ್ಯ ಭಾಗದಲ್ಲಿರುವ ವಜ್ರ​ 50 ಕ್ಯಾರೆಟ್​ ಗಾತ್ರದ್ದಾಗಿರಲಿದೆ.

ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಆಭರಣ ವ್ಯಾಪಾರಿಗಳ ತಜ್ಞರ ಮಾರ್ಗದರ್ಶನದಲ್ಲಿ ಕಿರೀಟ ವಿನ್ಯಾಸಗೊಳಿಸಲಾಗುತ್ತಿದೆ. ಈ ಕಿರೀಟವನ್ನು ತಯಾರಿಸುವವರು, 1900ರ ಇಸವಿಯಿಂದ ಆಭರಣ ಕರಕುಶಲತೆಯಲ್ಲಿ ಪರಿಣತಿಗೆ ಹೆಸರುವಾಸಿಯಾಗಿದ್ದಾರೆ. ಭಗವಾನ್​ ಬಾಲಾಜಿ ತಿರುಮಲ ದೇವಸ್ಥಾನ ಸೇರಿದಂತೆ ವಿವಿಧ ಪವಿತ್ರ ದೇವಾಲಯಗಳಿಗೆ ಇವರೇ ಆಭರಣಗಳನ್ನು ರಚಿಸಿದ್ದಾರೆ ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ.

ಸುಕೇಶ್​ ಚಂದ್ರಶೇಖರ್​ ಜೈಲಿನಲ್ಲಿರುವ ಕಾರಣ ಈ ಕಿರೀಟವನ್ನು ಅವರ ಕಾನೂನು ಸಲಹೆಗಾರ ಅನಂತ್​ ಮಲಿಕ್​ ಟ್ರಸ್ಟ್​ಗೆ ನೀಡುವ ಜವಾಬ್ದಾರಿ ಒಪ್ಪಿಸಿದ್ದಾರೆ. ಕಿರೀಟಕ್ಕೆ ಸಂಬಂಧಿಸಿದ ಅಗತ್ಯ ಬಿಲ್​ಗಳು, ರಶೀದಿಗಳು ಮತ್ತು ಪ್ರಮಾಣ ಪತ್ರಗಳನ್ನು ಒದಗಿಸುವುದೂ ಸೇರಿದಂತೆ ಎಲ್ಲಾ ಕಾನೂನು ಔಪಚಾರಿಕತೆಗಳನ್ನು ಪೂರೈಸಲಾಗಿದೆಯೇ ಎಂದು ಅನಂತ್​ ಮಲಿಕ್​ ಖಚಿತಪಡಿಸಿಕೊಳ್ಳುತ್ತಾರೆ ಎಂದು ಪತ್ರದಲ್ಲಿ ಸುಕೇಶ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಅಯೋಧ್ಯಾ ರಾಮನಿಗೆ ವಜ್ರ ಖಚಿತ ಚಿನ್ನದ ಮುಕುಟ ಕಾಣಿಕೆ ನೀಡಲು ಮುಂದಾದ ಸುಕೇಶ್​ ಚಂದ್ರಶೇಖರ್

ABOUT THE AUTHOR

...view details