ಬೆಂಗಳೂರು: ಕೋವಿಡ್ ಸಂಬಂಧ ಸೌಕರ್ಯಗಳ ಕೊರತೆ ಉಂಟಾಗಿದೆ ಎಂದು ಆರೋಪಿಸಿ ಜಂಟಿ ಆಯುಕ್ತರ ಕಚೇರಿ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾರ್ಪೊರೇಟರ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ನಗರದ ಬಹುತೇಕ ಎಲ್ಲಾ ವಾರ್ಡ್ಗಳಿಗೆ ಕೋವಿಡ್ನ ಎಲ್ಲಾ ಸೌಲಭ್ಯ ಇದೆ ಅಂತಾರೆ. ಆದ್ರೆ ವಾರ್ಡ್ನಲ್ಲಿ ಗಂಟಲು ದ್ರವ ಪರೀಕ್ಷೆಗೆ ಕನಿಷ್ಠ ಸೌಲಭ್ಯವೂ ಇಲ್ಲದೆ ಕೋವಿಡ್ನಿಂದ ಜನ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಂದ ಛೀಮಾರಿ ಹಾಕಿಸಿಕೊಳ್ಳುವುದಕ್ಕಿಂತ ದೇಹತ್ಯಾಗ ಮಾಡುವುದು ಒಳ್ಳೆಯದು ಎಂದು ಯಶವಂತಪುರ ವಾರ್ಡ್ ಸದಸ್ಯ ಜಿ.ಕೆ. ವೆಂಕಟೇಶ್ ಸೀಮೆ ಎಣ್ಣೆ ಕ್ಯಾನ್ ಹಿಡಿದು, ಆರ್ ಆರ್ ನಗರ ಜಂಟಿ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೋವಿಡ್ ಅವ್ಯವಸ್ಥೆಗೆ ಬೇಸತ್ತ ಪಾಲಿಕೆ ಸದಸ್ಯನಿಂದ ಆತ್ಮಹತ್ಯೆಯ ಬೆದರಿಕೆ..! ಕೋವಿಡ್ ನಿರ್ವಹಣೆಗೆ ಪಾಲಿಕೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ವಾರ್ಡ್ನಲ್ಲಿ ಕೋವಿಡ್ ಟೆಸ್ಟ್ಗೆ ಸರಿಯಾದ ಜಾಗವೂ ಇಲ್ಲ. ಅರ್ಧಂಬರ್ಧ ಕಟ್ಟಿದ ಆಸ್ಪತ್ರೆಯಲ್ಲಿ ಕೋವಿಡ್ ಸ್ವಾಬ್ ಟೆಸ್ಟ್ ಮಾಡಲಾಗುತ್ತಿದೆ. ಕೇವಲ ಒಬ್ಬರೇ ಒಬ್ಬರು ವೈದ್ಯರು, ಟೆಕ್ನೀಷಿಯನ್ ಅನ್ನು ಕೊಡಲಾಗಿದೆ. 60-100 ಜನ ಟೆಸ್ಟಿಂಗ್ಗೆ ಬಂದರೂ ಯಾವುದೂ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅಲ್ಲದೆ ಈಗಾಗಲೇ 70 ಜನಕ್ಕೆ ಪಾಸಿಟಿವ್ ಬಂದಿದ್ದು, 5 ಜನ ಸಾವಿಗೀಡಾಗಿದ್ದಾರೆ. ನಮ್ಮ ಬಳಿ ಪರಿಸ್ಥಿತಿ ನಿಭಾಯಿಸಲು ಸಿಬ್ಬಂದಿ, ವೈದ್ಯರು, ನರ್ಸ್ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹೆಚ್ಚುವರಿ ವೈದ್ಯರು, ಪಿಪಿಇ ಕಿಟ್, ಆಶಾ ಕಾರ್ಯಕರ್ತೆಯರು, ಸ್ಟಾಫ್ ನರ್ಸ್ ಕೊಡುವಂತೆ ಆಗ್ರಹಿಸಿದ್ದಾರೆ.
20 ಕೊರೊನಾ ರೋಗಿಗಳ ಮನೆಗಳಿಗೆ ರೇಷನ್ ಕಿಟ್ ಕೊಡಬೇಕು. ಇಲ್ಲವಾದಲ್ಲಿ ಆಯುಕ್ತರ ಕಚೇರಿ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಎಚ್ಚರಿಸಿದರು. ಅಲ್ಲದೆ ಅಧಿಕಾರಿಗಳ ಗಮನಕ್ಕೆ ತರಲು ಮುಂದಿನ ಮಂಗಳವಾರ ನಡೆಯುವ ಕೌನ್ಸಿಲ್ ಸಭೆಯಲ್ಲಿ ಅಧಿಕಾರಿ, ಮೇಯರ್ ಬಳಿ ಪ್ರಶ್ನಿಸುತ್ತೇನೆ ಎಂದರು.