ಕರ್ನಾಟಕ

karnataka

ETV Bharat / state

ಪತ್ನಿ ತೊರೆದು ಪ್ರಿಯತಮೆ ಜೊತೆಗೆ ಬಂದಿದ್ದ ಯುವಕ ಆತ್ಮಹತ್ಯೆ - Dakshina Kannada Sullyada Bellare

ಬೆಂಗಳೂರಿನ ಜ್ಞಾನಭಾರತಿ ಸಮೀಪದ ವಿಶ್ವೇಶ್ವರ ಲೇಔಟ್‌ನಲ್ಲಿ ಪತ್ನಿಯನ್ನು ಬಿಟ್ಟು ಪ್ರೇಯಸಿಯೊಂದಿಗೆ ಬಂದಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

Bangalore
ಬೆಂಗಳೂರು

By

Published : Feb 20, 2023, 8:03 AM IST

ಬೆಂಗಳೂರು/ದಕ್ಷಿಣ ಕನ್ನಡ: ಪತ್ನಿಯನ್ನು ತೊರೆದು ಪ್ರಿಯತಮೆಯ ಜೊತೆಗೆ ಬಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಜ್ಞಾನಭಾರತಿ ಸಮೀಪದ ವಿಶ್ವೇಶ್ವರ ಲೇಔಟ್‌ನಲ್ಲಿ ನಡೆದಿದೆ. ಕೊಮ್ಮಘಟ್ಟದ ವೀರಭದ್ರ ನಗರದ ನಾಗೇಶ್ ಆತ್ಮಹತ್ಯೆಗೆ ಶರಣಾದ ಯುವಕ. 6 ವರ್ಷದ ಹಿಂದೆ ಮಧುಶ್ರೀ ಎಂಬಾಕೆಯನ್ನು ನಾಗೇಶ್ ಮದುವೆಯಾಗಿದ್ದ. ಕೊಮ್ಮಘಟ್ಟದ ವೀರಭದ್ರ ನಗರದಲ್ಲಿ ದಂಪತಿ ವಾಸಿಸುತ್ತಿದ್ದರು.

ಈ ವೇಳೆ ನಾಗೇಶ್​ಗೆ ಸಹನಾ ಎಂಬಾಕೆಯ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಹೀಗಾಗಿ ಹೆಂಡತಿ ಬಿಟ್ಟು ಸಹನಾಳ ಸಹವಾಸ ಬೆಳೆಸಿದ್ದ. ಈ ವಿಚಾರ ತಿಳಿದ ಪತ್ನಿ ಮಧುಶ್ರೀ ಪತಿಯ ಜೊತೆಗೆ ಜಗಳ ಮಾಡಿದ್ದಳು. ಹೀಗಾಗಿ ಪ್ರಿಯತಮೆ ಜೊತೆ ಫೆ.10 ರಂದು ನಾಗೇಶ್ ಮನೆ ಬಿಟ್ಟು ಪರಾರಿಯಾಗಿದ್ದ. ನಂತರ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಜ್ಞಾನಭಾರತಿಯ, ವಿಶ್ವೇಶ್ವರ ಲೇಔಟ್‌ನಲ್ಲಿ ವಾಸಿಸುತ್ತಿದ್ದ. ಆದರೆ, ಭಾನುವಾರ ಬೆಳಗ್ಗೆ ವಿಶ್ವೇಶ್ವರ ಲೇಔಟ್ ಬಳಿ ನಾಗೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ನಾಯಕಿ‌ಯಿಂದ ಅಳಿಯನ ಅಪಹರಣ ಮಾಡಿಸಿದ ಆರೋಪ:ಅಳಿಯನನ್ನೇ ಅಪಹರಣ ಮಾಡಿಸಿ ಆಸ್ಪತ್ರೆಗೆ ದಾಖಲಿಸಿ ಮಾನಸಿಕ ಅಸ್ವಸ್ಥ ಎಂಬುದಾಗಿ ಬಿಂಬಿಸಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕಿ ಹಾಗೂ ಅವರ ಕುಟುಂಬದ ಐವರ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ನಾಯಕಿ‌ ಅಳಿಯನಾಗಿರುವ ದಕ್ಷಿಣ ಕನ್ನಡ ಸುಳ್ಯದ ಬೆಳ್ಳಾರೆ ನಿವಾಸಿ ನವೀನ್‌ಎಂ.ಗೌಡ ನೀಡಿದ ದೂರಿನನ್ವಯ ಆರೋಪಿಗಳಾದ ಕಾಂಗ್ರೆಸ್ ನಾಯಕಿ‌, ಅವರ ಕುಟುಂಬದವರು ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ತನಿಖೆ ಮುಂದುವರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ನವೀನ್ ಎಂ.ಗೌಡ ಅವರ ಊರಿನ ಪಕ್ಕದ ಊರಾದ ಕಾಂಗ್ರೆಸ್ ನಾಯಕಿ‌ ಪುತ್ರಿಯನ್ನು 2019 ರ ಫೆ.8 ರಂದು ವಿವಾಹವಾಗಿದ್ದರು. ಆದರೆ 2022 ಅಕ್ಟೋಬರ್‌ನಿಂದ ದಂಪತಿಗಳಿಬ್ಬರ ನಡುವೆ ನಡುವೆ ಸಾಂಸಾರಿಕ ಕಾರಣಗಳಿಗೆ ಮನಸ್ತಾಪ ಉಂಟಾಗಿತ್ತು. ಈ ಬಗ್ಗೆ ಎರಡೂ ಕುಟುಂಬಗಳ ನಡುವೆ ಹಲವು ಬಾರಿ ನ್ಯಾಯ ಪಂಚಾಯಿತಿ ನಡೆದಿತ್ತು. ಈ ನಡುವೆ ನವೀನ್​ನ ಪತ್ನಿಗೆ ಬೇರೆಯವರ ಜೊತೆಗೆ ಸಂಬಂಧ ಇದುದ್ದರಿಂದ ಆಕೆ ಮೊಬೈಲ್ ಮೂಲಕ ನಡೆಸಿದ್ದ ಅಶ್ಲೀಲ ಚಾಟ್‌ಗಳು ಸಿಕ್ಕಿದ್ದರಿಂದ ಆಕೆಯನ್ನು ತಿರಸ್ಕರಿಸಿ ದೂರವಾಗಿದ್ದೆ ಎಂದು ದೂರಿನಲ್ಲಿ ನವೀನ್ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಪಿಗಳು ಒಳಸಂಚು ರೂಪಿಸಿ 2022 ಡಿ.19 ರಂದು ಮನೆಗೆ ಬಂದು, ಬಲವಂತವಾಗಿ ನನ್ನ ಕೈ ಕಾಲು ಕಟ್ಟಿ ಹಾಕಿ ಆಂಬ್ಯುಲೆನ್ಸ್‌ನಲ್ಲಿ ಜೆ.ಪಿ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಆ ಆಸ್ಪತ್ರೆ ವೈದ್ಯರ ಜೊತೆಗೆ ಒಳ ಒಪ್ಪಂದದ ಮಾತುಕತೆ ನಡೆಸಿ ನನ್ನನ್ನು ಮಾನಸಿಕ ಅಸ್ವಸ್ಥ ಎಂಬುದಾಗಿ ಬಿಂಬಿಸಿ ಅಕ್ರಮ ಬಂಧನದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ ಆರೋಪಿಗಳು ಆಸ್ಪತ್ರೆಯಲ್ಲಿಯೇ ಕೈಗಳಿಂದ ಮುಖ ಹಾಗೂ ದೇಹದ ಇತರೆ ಕಡೆ ಹಲ್ಲೆ ಮಾಡಿ ಚಿಕಿತ್ಸೆಗೆ ಸಮ್ಮತಿ ನೀಡಿರುವುದಾಗಿ ಬಿಂಬಿಸಿದ್ದರು.

ಬಳಿಕ ಕೆಲವು ಕಾಗದ ಪತ್ರಗಳಿಗೆ ಬಲವಂತವಾಗಿ ಸಹಿ ಹಾಕುವಂತೆ ಒತ್ತಾಯ ಮಾಡುತ್ತಿದ್ದರು. ಯಾವುದೇ ಕಾಗದ ಪತ್ರಗಳಿಗೆ ಸಹಿ ಮಾಡದಿರುವ ಕಾರಣ ಆರೋಪಿಗಳೇ ಕೆಲ ಕಾಗದ ಪತ್ರಗಳನ್ನು ಸೃಷ್ಟಿ ಮಾಡಿ, ಆ ಪತ್ರಗಳಿಗೆ ನನ್ನ ನಕಲಿ ಸಹಿ ದಸ್ತಾವೇಜು ಸೃಷ್ಟಿಸಿಕೊಂಡಿರುತ್ತಾರೆ. ಅಪಹರಣದ ಸಂಬಂಧ ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಸಂಬಂಧ ಹೈಕೋರ್ಟ್ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ 2022ರ ಡಿ.22ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದೇನೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ನವೀನ್ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಉಳ್ಳಾಲ: ಪೊಲೀಸ್ ಪೇದೆಯ ಸಾವಿಗೆ ಶರಣು .. ಆತ್ಮಹತ್ಯೆಗೆ ಯತ್ನಿಸಿದ ಪಿಯುಸಿ ವಿದ್ಯಾರ್ಥಿನಿ ಸಾವು

ABOUT THE AUTHOR

...view details