ಬೆಂಗಳೂರು: ಸಹಕಾರ ಇಲಾಖೆ ಚುನಾವಣೆಗೆ ಸರ್ಕಾರ ವೆಚ್ಚ ಭರಿಸುವುದಿಲ್ಲ. ಹಾಗಾಗಿ ಚುನಾವಣಾ ವೆಚ್ಚ ಇಷ್ಟೇ ಎಂದು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಶೇ.65 ರಿಂದ 70 ರಷ್ಟು ಹೊಂದಾಣಿಕೆ ಮೇಲೆ ಚುನಾವಣೆ ನಡೆಯುತ್ತದೆ. ಇನ್ನೂ ಕೆಲವು ಕಡೆ ರಕ್ತಪಾತ ಉಂಟಾಗುವ ಸಾಧ್ಯತೆ ಇದ್ದು, ಅಂತಹ ಕಡೆ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಇಲ್ಲಿ ವೆಚ್ಚ ಹೆಚ್ಚಾಗುತ್ತದೆ. ಚುನಾವಣೆ ಸುಧಾರಣೆಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಇಲ್ಲಿ ಇನ್ನಷ್ಟು ಬದಲಾವಣೆ ಮಾಡಬೇಕಿದ್ದರೆ ಸೂಚಿಸಲಿ. ಇದೇ ಅಧಿವೇಶನ ಮುಗಿಯುವ ಮುನ್ನ ಅಳವಡಿಸಿಕೊಳ್ಳುತ್ತೇವೆ. ಏನೇ ಸಲಹೆ, ಸೂಚನೆಗಳಿದ್ದರೂ ಕಳುಹಿಸಿಕೊಡಬಹುದು ಎಂದರು.
ಸಹಕಾರಿ ಚುನಾವಣೆ ಸಂದರ್ಭ ಅನಗತ್ಯ ವೆಚ್ಚ ಆಗುತ್ತದೆ. ಪೊಲೀಸರನ್ನು ಹೆಚ್ಚು ನಿಯೋಜಿಸಿ ವೆಚ್ಚ ಹೆಚ್ಚಿಸಲಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸದಸ್ಯ ಅನಿಲ್ ಕುಮಾರ್ ಮನವಿ ಮಾಡಿದರು.
ಇದನ್ನೂ ಓದಿ:ಬಾಳ ಜಾಣರಿದ್ದೀರಿ ಎಂದ ರಮೇಶ್ ಕುಮಾರ್ಗೆ ನಿನ್ನ ಹತ್ರನೇ ಕಲಿತ್ತಿದ್ದೀನಿ ಎಂದ ಸಿದ್ದರಾಮಯ್ಯ
ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಸರೋಜಿನಿ ಮಹಿಷಿ ವರದಿ ಅನ್ವಯ ಆದ್ಯತೆ ನೀಡುವ ಕಾರ್ಯ ಕೈಗಾರಿಕಾ ಕ್ಷೇತ್ರದಲ್ಲಿ ಆಗುತ್ತಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಜೆಡಿಎಸ್ ಸದಸ್ಯ ಮಂಜೇಗೌಡ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಸಮಾನವಾಗಿ ಕೈಗಾರಿಕೆ ಹಂಚಿಕೆ ಮಾಡಲು ಒಂದು ಜಿಲ್ಲೆ, ಒಂದು ಕೈಗಾರಿಕೆ ಕಾರ್ಯಕ್ರಮ ರೂಪಿಸಿದ್ದೇವೆ. ಎರಡು ಹಾಗೂ ಮೂರನೇ ಹಂತದ ನಗರಕ್ಕೆ ಕೈಗಾರಿಕೆ ಬಂದರೆ ಹೆಚ್ಚು ರಿಯಾಯಿತಿ ನೀಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಮೈಸೂರು, ಚಾಮರಾಜನಗರ ಇತರೆ ಜಿಲ್ಲೆಗೆ ಅಗತ್ಯವಿರುವ ಕೈಗಾರಿಕೆ ಬಂದಲ್ಲಿ ನಿಯೋಜಿಸುವ ಕಾರ್ಯ ಮಾಡುತ್ತೇವೆ. ಕೈಗಾರಿಕೆಗಳು ಬಂದರೆ ಮನವೊಲಿಸಿ ಹಳೆ ಮೈಸೂರು ಭಾಗಕ್ಕೆ ಕಳುಹಿಸಿಕೊಡುತ್ತೇವೆ ಎಂದರು.