ಬೆಂಗಳೂರು: ಕಬ್ಬು ಬೆಳೆಗಾರರ ಪ್ರತಿಭಟನೆಯ 5ನೇ ದಿನವಾದ ಇಂದು ಸರ್ಕಾರದ ನಿರ್ಲಕ್ಷ್ಯ ನೀತಿಯ ವಿರುದ್ಧ ಅಣಕು ಶವಯಾತ್ರೆ ನಡೆಸಲು ಯತ್ನಿಸಿದಾಗ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸಲು, ಕಾರ್ಪೊರೇಟ್ ಉದ್ಯಮಿಗಳ ಮರ್ಜಿಯಲ್ಲಿ ವಾಮ ಮಾರ್ಗದಲ್ಲಿ ವ್ಯವಸ್ಥಿತ ಕಾರ್ಯಯೋಜನೆ ಜಾರಿಗೆ ತರುತ್ತಿದೆ, ದೆಹಲಿಯಲ್ಲಿ ರೈತರು ಒಂದು ವರ್ಷ ಚಳವಳಿ ನಡೆಸಿದ ಕಾರಣ ನವಂಬರ್ 26 ಪ್ರಧಾನಿ ಮೋದಿ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ರೂಪಿಸುತ್ತೇವೆ ಎಂದು ಭರವಸೆ ನೀಡಿ ಒಂದು ವರ್ಷವಾದರೂ ಜಾರಿಗೆ ತಂದಿಲ್ಲ, ಪದೇ ಪದೆ ರೈತರಿಗೆ ಸುಳ್ಳು ಹೇಳುತ್ತಲೇ ರಾಜ್ಯಭಾರ ಮಾಡುತ್ತಿದ್ದಾರೆ.
ಸ್ವಾಮಿನಾಥನ್ ವರದಿಯನ್ನ ಜಾರಿಗೆ ತರಲಿಲ್ಲ, ರೈತರ ಆದಾಯ ದ್ವಿಗುಣ ಭರವಸೆ ಈಡೇರಿಸಿಲ್ಲ, ಕೃಷಿ ಉತ್ಪನ್ನಗಳಿಗೆ ಜಿಎಸ್‌ಟಿ ತೆರಿಗೆ ಹಾಕಿ ಮತ್ತಷ್ಟು ಸಂಕಷ್ಟ ಉಂಟು ಮಾಡಿದ್ದಾರೆ ಎಂದು ಅಣಕು ಶವ ಯಾತ್ರೆ ಆರಂಭಿಸಲು ಮುಂದಾದ ರೈತರಿಂದ ನಾವು ಅನುಮತಿ ನೀಡಿಲ್ಲ ಎಂದು ಪೊಲೀಸರು ತಡೆದರು.
ಆಗ ಪೊಲೀಸರು ರೈತರ ನಡುವೆ ವಾಗ್ವಾದ ನಡೆಯಿತು ನೈಜ ರೈತನನ್ನ ಶವದ ರೀತಿ ಮಲಗಿಸಿ ಮೆರವಣಿಗೆ ಮುಂದಾದಾಗ ದಬ್ಬಾಳಿಕೆ ನಡೆಸಿ ಎಲ್ಲ ರೈತರನ್ನು ಬಂಧಿಸಿ ಕರೆದೊಯ್ದಿದ್ದಾರೆ, ಸರ್ಕಾರ ಪೊಲೀಸ್ ಬಲದ ಮೂಲಕ ಹೋರಾಟಗಾರರ ಹಕ್ಕನ್ನು ದಮನಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ನಂತರ ಮಾತನಾಡಿದ ಅವರು ಸಕ್ಕರೆ ಕಾರ್ಖಾನೆಗಳ ಮಾಲೀಕರ ಮರ್ಜಿಯಲ್ಲಿ ಸಾಗುತ್ತಿದ್ದು, ಚುನಾವಣೆಯ ವೇಳೆ ಸಕ್ಕರೆ ಕಾರ್ಖಾನೆಗಳ ಉಡುಗೊರೆ ನೆಪದಿಂದ, ಕಬ್ಬು ಬೆಳೆಗಾರ ರೈತರಿಗೆ ವಂಚನೆ ಎಸಗುತಿದ್ದು, ಇನ್ನೂ ರೈತರು ಸುಮ್ಮನೆ ಕುಳಿತರೆ, ಬೀದಿಗೆ ತಳ್ಳುತ್ತಾರೆ ಐದು ದಿನದಿಂದ ಧರಣಿ ಕುಳಿತ ರೈತರ ಸಮಸ್ಯೆ ಬಗೆಹರಿಸದೇ, ವಾಮ ಮಾರ್ಗ ಬಳಸುತ್ತಿದ್ದಾರೆ ಇನ್ನೂ ರೈತರು ಸುಮ್ಮನೆ ಕೂರಬಾರದು ಎಂದು ರೈತರಿಗೆ ಕರೆ ನೀಡಿದರು.
ಎಫ್.ಆರ್.ಪಿ ದರ ನಿಗದಿಯಲ್ಲಿ ತಾರತಮ್ಯ:ಕಬ್ಬಿನ ಎಫ್.ಆರ್.ಪಿ ದರ ನಿಗದಿ ಮಾಡುವಾಗ ರೈತರಿಗೆ ಚಳ್ಳೆಹಣ್ಣು ತಿನಿಸಿದ್ದಾರೆ, ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಮಾನದಂಡವನ್ನು 8.5 ರಿಂದ 10.25ಕ್ಕೆ ಏರಿಕೆ ಮಾಡಿ ಕಬ್ಬು ದರ ಏರಿಕೆ ಮಾಡಿದ್ದೇವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಭತ್ತ ಬೆಳೆ ರೈತರು ಅತಿವೃಷ್ಟಿ ಮಳೆ ಹಾನಿಯಿಂದ ಸಂಕಷ್ಟದಿದ್ದಾರೆ ಇಳುವರಿ ಕಡಿಮೆಯಾಗಿದೆ.