ಬೆಂಗಳೂರು: ಕಬ್ಬಿನ ಎಫ್ಆರ್ಪಿ ದರಕ್ಕೆ ಹೆಚ್ಚುವರಿಯಾಗಿ 100 ರೂ ದರವನ್ನು ಉಪ ಉತ್ಪನ್ನಗಳ ಲಾಭದಿಂದ ಹಂಚಿಕೆ ಮಾಡಿರುವುದು ಹಾಗೂ ಯತ್ನಾಲ್ ಉತ್ಪಾದನೆಯ ಕಾರ್ಖಾನೆಗಳು ಹೆಚ್ಚುವರಿವಾಗಿ 50 ರೂ ನೀಡುವುದು ಸೇರಿದಂತೆ ಒಟ್ಟು 150 ರೂ ನೀಡಲು ಆದೇಶ ಹೊರಡಿಸಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನಕರ ಸಂಗತಿಯಾಗಿದೆ. ಹೀಗಾಗಿ 39 ದಿನದ ಆಹೋರಾತ್ರಿ ಧರಣಿಯನ್ನು ಕಬ್ಬು ಬೆಳೆಗಾರರು ಕೈಬಿಟ್ಟದ್ದಾರೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ಸ್ಥಳದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ಸಕ್ಕರೆ ಕಾರ್ಖಾನೆಗಳು ಯಾವುದೇ ಮಾನದಂಡವಿಲ್ಲದೆ ಮತ್ತು ಯಾರ ಅನುಮತಿಯೂ ಇಲ್ಲದೆ ಪ್ರಸಕ್ತ ಸಾಲಿನಲ್ಲಿ ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು 250 ರಿಂದ 300 ರೂ ಏರಿಕೆ ಮಾಡಿದೆ. ಹಣದಲ್ಲಿ ಕಾರ್ಖಾನೆಗಳಿಂದ 150 ರೂ ಕಡಿಮೆ ಮಾಡುವ ಆದೇಶವಾದಾಗ ರೈತರ ಕಬ್ಬು ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಸಿಗುತ್ತದೆ ಎಂದರು.
ಈ ನಿಟ್ಟಿನಲ್ಲಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹುಬ್ಬಳ್ಳಿಯಿಂದ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಸರ್ಕಾರದ ಆದೇಶ ಪ್ರತಿಯನ್ನು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜನರಲ್ ಮ್ಯಾನೇಜರ್ ಬಸವರಾಜ್ ಸೂಮಣ್ಣನವರ್ ಚಳುವಳಿ ಸ್ಥಳಕ್ಕೆ ಆಗಮಿಸಿ ನೀಡಿದ್ದಾರೆ. ಸಕ್ಕರೆ ಅಭಿವೃದ್ಧಿ ಆಯುಕ್ತರು ಸಹ ಇದೇ ವೇಳೆ ಮೂಬೈಲ್ ನಲ್ಲಿ ಮಾತನಾಡಿ ಧರಣಿ ಕೈ ಬಿಡಬೇಕು ಎಂದು ಮನವಿ ಮಾಡಿದರು ಎಂದು ಹೇಳಿದರು.