ಬೆಂಗಳೂರು: ಕಬ್ಬು ಬೆಲೆ ನಿಗದಿ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಸಚಿವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಯುತ್ತಿರುವ ಸಭೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಉಪಸ್ಥಿತಿಗೆ ಕೆಲ ರೈತರು ಆಕ್ಷೇಪ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರೊಂದಿಗೆ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ರೈತರ ಮಧ್ಯೆ ಕೆಲ ಹೊತ್ತು ಜಟಾಪಟಿ ನಡೆಯಿತು. ಸಭೆ ನಡೆಯುವ ಮುನ್ನ ರೈತ ವಿಜಯ್ ಕುಮಾರ್ ಎಂಬವರು ಕೋಡಿಹಳ್ಳಿ ಚಂದ್ರಶೇಖರ್ ಸಭೆಯಲ್ಲಿ ಹಾಜರಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಭಾ ಸೂಚನೆಯಲ್ಲಿ ಕೋಡಿಹಳ್ಳಿ ಹೆಸರಿಲ್ಲ. ಅದರೂ ಸಭೆಯಲ್ಲಿ ಕೋಡಿಹಳ್ಳಿ ಪಾಲ್ಗೊಂಡಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಾಕಷ್ಟು ಆರೋಪ ಇದೆ. ಸಾರ್ವಜನಿಕ ವಲಯದಲ್ಲಿ ಅವರ ಮೇಲೆ ಆರೋಪ ಕೇಳಿ ಬಂದಿದೆ. ಅವರ ಸಮ್ಮುಖದಲ್ಲಿ ಚರ್ಚೆ ನಡೆಯುವುದ ಉಚಿತವಲ್ಲ. ಅವರ ಉಪಸ್ಥಿತಿಯಲ್ಲಿ ಸಭೆ ನಡೆಸುವುದು ಬೇಡ ಎಂದು ಸಚಿವರಲ್ಲಿ ಒತ್ತಾಯ ಮಾಡಿದರು.
ಈ ವೇಳೆ ಸಚಿವರು ಸದ್ಯ ಸಭೆಯಲ್ಲಿ ಯಾವುದೇ ಗೊಂದಲ ಆಗುವುದು ಬೇಡ. ಸಭೆ ನಡೆಸೋಣ. ಎಲ್ಲರೂ ಕೂಡಿ ಚರ್ಚೆ ಮಾಡೋಣ ಎಂದು ರೈತರಲ್ಲಿ ಮನವಿ ಮಾಡಿದರು. ಆದರೆ, ರೈತರು ತಮ್ಮ ಪಟ್ಟು ಬಿಡದೆ, ಅವರ ಉಪಸ್ಥಿತಿಯಲ್ಲಿ ಸಭೆ ನಡೆಸುವುದು ಸಮಂಜಸವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಭೆಯಲ್ಲಿ ಇದ್ದ ಕೆಲವರು ಬೆಂಬಲ ಸೂಚಿಸಿದರೆ ಕೋಡಿಹಳ್ಳಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದರು.
ನಾವು ರೈತ ಪರವಾಗಿದ್ದೇವೆ. ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆರೋಪ ಇದೆ. ಆರೋಪ ಇಲ್ಲದೇ ಇದ್ದರೆ ನಾವು ಅವರನ್ನು ಒಪ್ಪಿಕೊಳ್ಳುತ್ತಿದ್ದೆವು. ಈ ನಿಟ್ಟಿನಲ್ಲಿ ಸಭೆಯಲ್ಲಿ ಅವರು ಭಾಗಿಯಾಗುವುದು ಸರಿಯಲ್ಲ ಎಂದರು ಅಸಮಾಧಾನ ಹೊರ ಹಾಕಿದರು.