ಬೆಂಗಳೂರು: ಕಬ್ಬಿನ ಎಫ್.ಆರ್.ಪಿ ಹೆಚ್ಚುವರಿ ದರ ನಿಗದಿ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಲಾಯಿತು. ರೈತರು ಮುಖ್ಯಮಂತ್ರಿ ಮನೆ ಮುಂದೆ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪೊರಕೆ ಚಳವಳಿ ಮೂಲಕ ಪ್ರತಿಭಟನೆ ಮುಂದುವರಿದಿದೆ.
ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿ 5 ದಿನದಲ್ಲಿ ವರದಿ ಪಡೆದು 20ರ ಒಳಗಾಗಿ ತಿರ್ಮಾನ ಕೈಗೂಳುವ ಸರ್ಕಾರ ಭರವಸೆ ನೀಡಿತ್ತು, ಇದು ಹುಸಿಯಾಗಿದೆ. ಸಕ್ಕರೆ ಸಚಿವರು ನುಡಿದಂತೆ ನಡೆಯದೆ ಇರುವುದನ್ನು ಖಂಡಿಸಿ, ರೈತರಿಗೆ ನ್ಯಾಯ ಸಿಗುವವರೆಗೆ ಚಳವಳಿ ನಡೆಸುವುದಾಗಿ ತೀರ್ಮಾನಿಸಿದ್ದೇವೆ. ಈ ಮೂಲಕ ಸರ್ಕಾರದ ವರ್ತನೆಯನ್ನು ಖಂಡಿಸಿ ಪೊರಕೆ ಚಳವಳಿ ನಡೆಸಲಾಗುತ್ತಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಕಬ್ಬು ಉತ್ಪಾದನಾ ವೆಚ್ಚ ಶೇಕಡ 20ರಷ್ಟು ಏರಿಕೆ: ಕಬ್ಬಿನ ಉತ್ಪಾದನೆಯ ವೆಚ್ಚ ಶೇಕಡ 20ರಷ್ಟು ಏರಿಕೆಯಾಗಿದೆ, ಆದರೆ, ಕೇಂದ್ರ ಸರ್ಕಾರ ಎಫ್.ಆರ್.ಪಿ(ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ) ದರ ನಿಗದಿ ಮಾಡುವಾಗ ರೈತರ ಕಣ್ಣಿಗೆ ಮಣ್ಣೆರಚಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಸುಲಿಗೆ ಮಾಡುತ್ತಿದೆ. ಲಗಾಣಿ ಹೆಚ್ಚು ಪಡೆಯಲಾಗುತ್ತಿದೆ. ಕಬ್ಬು ಕಟಾವಾಗಿ 16 ತಿಂಗಳಾಗಿದೆ. ಸಾಗಾಣಿಕೆ ವೆಚ್ಚ ಎಲ್ಲ ದೂರಕ್ಕೂ ಒಂದೆ ದರ ನಿಗದಿ ಮಾಡಿ ರೈತರನ್ನು ವಂಚಿಸಲಾಗುತ್ತಿದೆ.
ಇದರಿಂದ ರೈತರಿಗೆ ನೂರಾರು ಕೋಟಿ ಮೋಸವಾಗುತ್ತಿದೆ. ಕಬ್ಬು ಪೂರೈಕೆ ಮಾಡಿದ ರೈತನಿಗೆ 14 ದಿನದಲ್ಲಿ ಹಣ ಪಾವತಿಸಬೇಕೆಂಬ ಕಾನೂನು ಜಾರಿಯಲ್ಲಿದ್ದರೂ ಯಾರೂ ಪಾಲನೆ ಮಾಡುತ್ತಿಲ್ಲ. ಯಾವ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ರೈತರು ದೂರು ನೀಡಿದರೆ ದೂರುಗಳು ಕಸದ ಬುಟ್ಟಿ ಸೇರುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ 189 ರೈತರು ಕಬ್ಬಿನ ಹಣ ಬಂದಿಲ್ಲ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆದು ಸಾಬಿತಾಗಿದರು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನುಡಿದರು.
ಕಬ್ಬು ಕಟಾವು ವಿಳಂಬ: ಕಬ್ಬು ಕಟಾವು 16 ರಿಂದ 18 ತಿಂಗಳು ವಿಳಂಬವಾಗುತ್ತಿದೆ. ಈ ರೀತಿ ವಿಳಂಬವಾಗಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿಗಾಗಿ ಶೇಕಡ 15 ಬಡ್ಡಿ ಸೇರಿಸಿ ಹೆಚ್ಚುವರಿ ಹಣ ಕಾರ್ಖಾನೆಗಳು ನೀಡುವಂತಾಗಬೇಕು. ಸರ್ಕಾರ ಪದೇ ಪದೆ ಕಾರ್ಖಾನೆ ಮಾಲೀಕರ ಸಭೆ ಕರೆದು ತೇಪೆ ಹಾಕಬಾರದು. ಕಾನೂನುನಾತ್ಮಕ ಅಧಿಕಾರಿ ನೇಮಕ ಮಾಡಬೇಕಾಗಿದೆ.