ಬೆಂಗಳೂರು:ವಿದ್ಯುತ್ ಕೊರತೆ ನೀಗಿಸಲು ಸಕ್ಕರೆ ಕಾರ್ಖಾನೆಗಳಿಗೆ ಮುಂಚಿತವಾಗಿ ಕಬ್ಬು ನುರಿಯುವ ಪ್ರಕ್ರಿಯೆ ಆರಂಭಿಸಲು ಅನುಮತಿಸಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ತಿಳಿಸಿದರು. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮುನ್ನ ಶುಗರ್ ಕ್ರಷಿಂಗ್ ಅನ್ನು ಮರ್ಜಿಗೆ ಬಂದಂತೆ ಮಾಡುತ್ತಿದ್ದರು. ಆದರೆ ಈ ಬಾರಿ ಏಕಕಾಲದಲ್ಲಿ ಎಲ್ಲಾ ಕಬ್ಬು ಕಾರ್ಖಾನೆಗಳಿಗೆ ಕಬ್ಬು ಅರೆಯಲು ಸೂಚನೆ ನೀಡಲಾಗಿದೆ. ವಿದ್ಯುತ್ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಅಕ್ಟೋಬರ್ 25ರ ನಂತರ ಎಲ್ಲ ಸಕ್ಕರೆ ಕಾರ್ಖಾನೆಯವರಿಗೆ ಕಬ್ಬು ಅರೆಯಲು ಅನುಮತಿ ನೀಡಿದ್ದೇವೆ ಎಂದರು.
ಬರದಿಂದಾಗಿ ಒಣಗುತ್ತಿರುವ ಕಬ್ಬು: ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ ಕಬ್ಬು ಒಣಗುತ್ತಿದೆ. ಹೀಗಾಗಿ ಕಬ್ಬು ನುರಿಯುವ ಹಂಗಾಮು ಬೇಗ ಮಾಡಲು ರೈತರು ಮನವಿ ಮಾಡಿದ್ದರು. ಉಪಉತ್ಪನ್ನ ಹೆಚ್ಚಿಸುವ ನಿಟ್ಟಿನಲ್ಲಿ ಮುಂಚಿತವಾಗಿ ಕಬ್ಬು ಅರೆಯಲು ಅನುಮತಿ ಕೊಡಲಾಗಿದೆ. ಮುಂಚಿತವಾಗಿ ಕಬ್ಬು ಅರೆದರೆ ಸಕ್ಕರೆ ಇಳುವರಿ ಕಡಿಮೆ ಬರುತ್ತೆ. ನವೆಂಬರ್‌ನಲ್ಲಿ ಮಾಡಿದರೆ ಇಳುವರಿ ಹೆಚ್ಚು. 11-12 ತಿಂಗಳು ಕಳೆದ ಕಬ್ಬು ಫಸಲು ಅರೆಯಲು ಅವಕಾಶ ನೀಡಲಾಗಿದೆ. 3.50-4.50 ಲಕ್ಷ ಟನ್ ಕಬ್ಬು ಅರೆಯಲು ಸಿಗಲಿದೆ. ಸಕ್ಕರೆ ಕಾರ್ಖಾನೆಗಳಿಂದ ಸುಮಾರು 1,800 ಮೆ.ವಾ ವಿದ್ಯುತ್ ದೊರೆಯಲಿದೆ ಎಂದು ಹೇಳಿದರು.
ಸಕ್ಕರೆ ಉತ್ಪಾದನೆ ಕಡಿಮೆ ಸಾಧ್ಯತೆ: ಈ ಬಾರಿ ಒಂದು ಲಕ್ಷ ಹೆಕ್ಟೇರ್ ಕಬ್ಬು ಬೆಳೆ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ. ಏಳು ಲಕ್ಷ ಹೆಕ್ಟೇರ್ ಕಬ್ಬು ಬೆಳೆ ಪೈಕಿ ಒಂದು ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಕಡಿಮೆಯಾಗುವ ಸಾಧ್ಯತೆ ಗೋಚರಿಸಿದೆ. ಹೀಗಾಗಿ ಸಕ್ಕರೆ ಕೊರತೆ ಎದುರಾಗುವ ಸಂಭವವಿದೆ. ಕಳೆದ ಬಾರಿ ಎಥೆನಾಲ್ 35,000 ಕೋಟಿ ಲೀಟರ್ ಉತ್ಪಾದನೆ ಆಗಿತ್ತು. ಈ ಬಾರಿ 40,000 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆ ಸಾಧ್ಯತೆ ಇದೆ. ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಇಳುವರಿ ತಗ್ಗಲಿದೆ. ಹೀಗಾಗಿ ಈ ಬಾರಿ ಗೃಹ ಬಳಕೆಯ ಸಕ್ಕರೆ ಕೊರತೆ ಎದುರಾಗಲಿದೆ ಎಂದು ತಿಳಿಸಿದರು.