ಬೆಂಗಳೂರು: ನಮ್ಮ ಜೀವನದಲ್ಲಿ ಬರುವ ಅನೇಕ ಕಾಲಘಟ್ಟಗಳನ್ನು ನಾವು ಹೀಗೇ ಇರಬೇಕೆಂದು ನಿರ್ಧರಿಸುತ್ತೇವೆ. ಆದರೆ ಎಲ್ಲ ಬೇಲಿಗಳನ್ನು ಮುರಿದು ಹೇಗೆ ನಮ್ಮ ನಂಬಿಕೆಯಿಂದ ಬದುಕಬಹುದೆಂದು ಶ್ರೀಲ ಪ್ರಭುಪಾದರ ಬಗೆಗಿನ ಪುಸ್ತಕದಲ್ಲಿ ತೋರಿಸಲಾಗಿದೆ ಎಂದು ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಹೇಳಿದರು. ಅವರು ಇಸ್ಕಾನ್ ವತಿಯಿಂದ ಆಯೋಜಿಸಿದ್ದ Sing, Dane and Pray -The inspirational story of Srila Prabhupada(ಇಸ್ಕಾನ್ ಸಂಸ್ಥಾಪಕ) ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸುಗಮವಾಗಿ ಸಾಗುವ ಜೀವನದಲ್ಲಿ ಬರುವ ತಿರುವನ್ನು ಒಪ್ಪಿಕೊಂಡು ಕೇವಲ ನಂಬಿಕೆಯಿಂದ ಅದನ್ನು ಜಯಿಸುವುದು ಕಷ್ಟದ ಸಂಗತಿ. ಆದರೆ ಅಧ್ಯಾತ್ಮ ನಂಬಿಕೆ ನಮ್ಮಲ್ಲಿ ಸದೃಢವಾಗಿರಬೇಕು. ಆಗ ನಮ್ಮ ಸಮಾಜದ ಕಟ್ಟುಪಾಡುಗಳನ್ನು ಮೀರಿ ಬೆಳೆಯಬಹುದೆಂದು ಶ್ರೀಲ ಪ್ರಭುಪಾದರು ತೋರಿಸಿಕೊಟ್ಟಿದ್ದಾರೆ. ಅವರು ನಡೆದ ಹಾದಿ ಅನೇಕರಿಗೆ ಮಾದರಿ. ಈ ಪುಸ್ತಕದಲ್ಲಿ ಎಲ್ಲೂ ನೈಜತೆ ಮೀರಿ ಹೇಳಿಲ್ಲ ಎಂದು ತಿಳಿಸಿದರು.
ಕರ್ಮ ಕರ್ಮವಾಗಿ ಪರಿವರ್ತಿಸುತ್ತದೆ: ನಾವು ಈ ಪ್ರಪಂಚದಲ್ಲಿ ಕೇವಲ ಕರ್ಮ ಮಾಡಲು ಬಂದಿದ್ದೇವೆ. ಮಾಡಿದ ಕರ್ಮದ ಫಲದ ಆಧಾರದ ಮೇಲೆ ನಮ್ಮ ಜೀವನ ನಿರ್ಧಾರ ಆಗುತ್ತದೆ. ಯಾವ ರೀತಿ ಬದುಕಿದ್ದೇವೆ ಮತ್ತು ಎಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಮಾತ್ರ ಲೆಕ್ಕ ಹಾಕಲಾಗುತ್ತದೆ. ಹಾಗಾಗಿ ಜೀವನದಲ್ಲಿ ಏನೇ ಸಾಧನೆ ಮಾಡಿದರು ಅದು ಕೇವಲ ದೇವರ ಇಚ್ಛೆ ಅಷ್ಟೇ ಎಂದು ಹೇಳಿದರು.
ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ: ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮಾತನಾಡಿ, ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ ವಿಷಯವನ್ನು ಎರಡು ವಿಧವಾಗಿ ಹೇಳುತ್ತದೆ. ಆಧ್ಯಾತ್ಮದಲ್ಲಿ ಶತಮಾನಗಳ ಹಿಂದೆಯೇ ನಾವು ಇಂದು ಕಂಡು ಹಿಡಿಯುತ್ತಿರುವ ವಿಜ್ಞಾನದ ಮಾದರಿಯನ್ನು ತಿಳಿಸಿದ್ದಾರೆ. ಹಾಗಾಗಿ ಅಧ್ಯಾತ್ಮ ಬೇರೆ ಎಂದು ಹೇಳುವುದು ತಪ್ಪು. ವಿಜ್ಞಾನ ಹೊರ ಜಗತ್ತಿನೊಂದಿಗೆ ಪ್ರಯೋಗ ಮಾಡಿದರೆ, ಆಧ್ಯಾತ್ಮ ನಮ್ಮೊಳಗೆ ಪ್ರಯೋಗ ಮಾಡುವುದನ್ನು ಕಲಿಸುತ್ತದೆ. ಆದರೆ ಅಂತಿಮ ಉತ್ತರ ಒಂದೇ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.