ಬೆಂಗಳೂರು: ವೈದ್ಯಕೀಯ ಶಿಕ್ಷಣ ಖಾತೆಯನ್ನು ವಾಪಸ್ ಪಡೆದ ನಂತರ ಮೌನಕ್ಕೆ ಶರಣಾಗಿದ್ದ ಆರೋಗ್ಯ ಸಚಿವ ಡಾ.ಸುಧಾಕರ್ ಕಡೆಗೂ ಮೌನ ಮುರಿದಿದ್ದು, ರಾಜಕೀಯ ಸೂಸೈಡ್ ಪರಿಸ್ಥಿತಿಯಲ್ಲಿ ಗೆದ್ದು ಬಂದಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶೇ ಮೂರರಷ್ಟು ಮತ ಪಡೆದಿರಲಿಲ್ಲ. ಅಂಥದ್ರಲ್ಲಿ ನಾನು ಎಷ್ಟು ರಿಸ್ಕ್ ತೆಗೆದುಕೊಂಡು ಬಂದಿದ್ದೀನಿ ಅನ್ನೋದು ಗೊತ್ತಿದೆ ಎಂದು ವಲಸಿಗ ಸಚಿವರ ಖಾತೆ ಬದಲಾವಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡು ಖಾತೆ ಯಾರಿಗೆ ಬೇಕಾದರೂ ಕೊಡಲಿ. ಆದರೆ, ಒಬ್ಬರಿಗೆ ಕೊಡಿ ಅನ್ನೋದು ನನ್ನ ಮನವಿ. ವೈದ್ಯಕೀಯ ಶಿಕ್ಷಣ ಒಂದು ವಿಶೇಷ ಸಬ್ಜೆಕ್ಟ್. ಮೆಡಿಕಲ್ ಎಜುಕೇಶನ್, ಆರೋಗ್ಯ ಇಲಾಖೆ ಒಂದಕ್ಕೊಂದು ಪೂರಕವಾದುದು. ಈಗ ಖಾತೆ ಹೊಂದಾಣಿಕೆ ಇಲ್ಲದಿದ್ದರೆ ಗೊಂದಲ ಸಾಧ್ಯತೆ ಇದೆ. ನನ್ನ ಅಸಮಾಧಾನ ಮುಖ್ಯವಲ್ಲ, ಈ ನಿರ್ಧಾರ ಲಸಿಕೆ ಹಂಚಿಕೆಗೆ ಗೊಂದಲ ಉಂಟಾಗಬಾರದು ಅನ್ನೋದಷ್ಟೇ ನನ್ನ ಉದ್ದೇಶ ಎಂದರು.
ಗೋಪಾಲಯ್ಯ, ನಾರಾಯಣಗೌಡರು, ಎಂಟಿಬಿ ನಾಗರಾಜ್‌ಗೆ ಅನ್ಯಾಯ ಆಗಿದೆ. ಗೋಪಾಲಯ್ಯ ಅವರ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ಎಂಟಿಬಿ ಅವರ ರಕ್ಷಣೆ ನಮ್ಮ ಕರ್ತವ್ಯ. ಈಗ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ನಮಗೆ ಪಾರ್ಟಿ ಡಿಸಿಪ್ಲೀನ್ ಅತ್ಯಂತ ಮುಖ್ಯವಾದದು. ಇಲ್ಲಿ ವೈಯಕ್ತಿಕ ಆಸೆ, ಆಕಾಂಕ್ಷೆ ಮುಖ್ಯವಲ್ಲ ಎಂದು ಅಸಮಾಧಾನ ಬಹಿರಂಗಪಡಿಸಿದರು.
ನಾನು ಕಂದಾಯ ಸಚಿವ ಆರ್. ಅಶೋಕ್ ಜೊತೆ ಮಾತಾಡಿಲ್ಲ. ಗೃಹ ಸಚಿವ ಬೊಮ್ಮಾಯಿ ಜೊತೆಗೆ ಮಾತನಾಡಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶೇ ಮೂರರಷ್ಟು ಮತ ಪಡೆದಿರಲಿಲ್ಲ. ಅಂಥದ್ದರಲ್ಲಿ ನಾನು ಎಷ್ಟು ರಿಸ್ಕ್ ತೆಗೆದುಕೊಂಡು ಬಂದಿದ್ದೀನಿ ಎಂದು ನನಗೆ ಗೊತ್ತಿದೆ. ನಾವು ರಾಜಕೀಯ ಸೂಸೈಡ್ ಪರಿಸ್ಥಿತಿಯಲ್ಲಿ ಗೆದ್ದು ಬಂದಿದ್ದೇವೆ. ಅದರಲ್ಲೂ ಎಂಟಿಬಿ ನಾಗರಾಜ್ ತಮ್ಮ ಬಳಿ ಇದ್ದ ವಸತಿ ಖಾತೆ ಬಿಟ್ಟು ಬಂದರು. ಆದ್ರೀಗ ಅವರಿಗೆ ಖಾತೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ. ಆರೋಗ್ಯ,ವೈದ್ಯಕೀಯ ಎರಡು ಖಾತೆ ಒಬ್ಬರ ಬಳಿ ಇದ್ದರೆ ಒಳ್ಳೆಯದು ಎಂದು ಸಿಎಂ ಗೆ ಮನವಿ ಮಾಡುತ್ತೇನೆ.
ನನಗೆ ಯಾವುದೇ ಅಸಮಾಧಾನ ಇಲ್ಲ. ಆದರೆ, ಎರಡೂ ಖಾತೆ ಒಬ್ಬರ ಬಳಿ ಇರುವಂತೆ ಮಾಡುವ ಕುರಿತು ಸಿಎಂ ಬಳಿ ಚರ್ಚೆ ಮಾಡುತ್ತೇನೆ ಎಂದರು.
ನನಗೆ ಬೇರೆ ಬೇರೆ ಕೆಲಸಗಳು ಇದ್ದವು. ಹೀಗಾಗಿ, ಕ್ಯಾಬಿನೆಟ್ ಗೆ ಹೋಗಿಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಚಿವ ಸಂಪುಟ ಸಭೆಗೆ ಗೈರಾದ ಕುರಿತು ಸ್ಪಷ್ಟೀಕರಣ ನೀಡಿದರು.