ಬೆಂಗಳೂರು: ಬಯಲು ಸೀಮೆಯಲ್ಲಿ ಬಿಜೆಪಿ ಸಂಘಟನಾ ಶಕ್ತಿ ಜಗಜ್ಜಾಹೀರಾಗಿದೆ. ಈ ಭಾಗದಲ್ಲಿ ಇಂತಹ ಸಮವೇಶ ಆಗಿರಲಿಲ್ಲ, ಈ ಭಾಗದಲ್ಲಿ ನಮ್ಮ ಸಂಘಟನೆಯನ್ನು ಪ್ರಶ್ನೆ ಮಾಡುತ್ತಿದ್ದವರಿಗೆ ಇಂದು ದಿಟ್ಟ ಉತ್ತರವನ್ನು ಇಲ್ಲಿನ ಜನ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನಡೆದ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶವಾದ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಅವರು, ಕೆಂಪೇಗೌಡರಿಗೆ ಜನ್ಮ ನೀಡಿದ ಪವಿತ್ರ ಭೂಮಿ ಇದಾಗಿದೆ. ಗುಜರಾತ್ನಲ್ಲಿ ಪಟೇಲ್ ಪ್ರತಿಮೆ ಮೋದಿ ನಿಲ್ಲಿಸಿದ್ದಾರೆ. ಅದೇ ರೀತಿ ನಮ್ಮ ಸಿಎಂ 108 ಅಡಿ ಎತ್ತರದ ಕೆಂಪೇಗೌಡರ ಮೂರ್ತಿ ಅಕ್ಟೋಬರ್ನಲ್ಲಿ ಅನಾವರಣ ಮಾಡಲಿದ್ದಾರೆ.
ಬೊಮ್ಮಾಯಿ ಬಂದು ಒಂದು ವರ್ಷವಾಯಿತು. ಮೊದಲೆರಡು ವರ್ಷ ಯಡಿಯೂರಪ್ಪ ಆಡಳಿತ ನಡೆಸಿದ್ದಾರೆ. ಇತಿಹಾಸ ಕಂಡರಿಯದ ಸಾಂಕ್ರಾಮಿಕ ರೋಗ ಎದುರಾದಾಗ ದಿಟ್ಟ ಆಡಳಿತ ನೀಡಿ ನಿಯಂತ್ರಣ ಮಾಡಿದ್ದಾರೆ. ಅದೇ ಹಾದಿಯಲ್ಲಿ ಬೊಮ್ಮಾಯಿ ಹೊಸ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಮೋದಿ ಪ್ರಧಾನ ಸೇವಕ ಎಂದು ಹೇಳಿಕೊಂಡರೆ ಬೊಮ್ಮಾಯಿ ಕಾಮನ್ ಮ್ಯಾನ್ ಎಂದು ಹೇಳಿಕೊಂಡು ಸರಳತೆ ಮೆರೆದಿದ್ದಾರೆ ಎಂದರು.
ಇಂದು ನಾವು ಯಾವುದೇ ವ್ಯಕ್ತಿಯ ವೈಭವೀಕರಣದ ಕಾರ್ಯಕ್ರಮ ಮಾಡುತ್ತಿಲ್ಲ. ಸಾರ್ಥಕ ಸೇವೆಯ ಅನಾವರಣ ಮಾಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ನಮ್ಮ ರಿಪೋರ್ಟ್ ಕಾರ್ಡ್ ಅನ್ನು ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಜನರ ಮುಂದಿಡುವ ಕೆಲಸ ಮಾಡಿದ್ದೇವೆ ಎಂದರು.
ವಿದ್ಯಾಸಿರಿ ಉತ್ಸವ, ಲಸಿಕಾ ಉತ್ಸವ, ಸ್ವಚ್ಛ ಭಾರತ ಉತ್ಸವ ಮಾಡುತ್ತಿದ್ದೇವೆಯೇ ಹೊರತು ಯಾವುದೇ ವ್ಯಕ್ತಿಯ ಉತ್ಸವ ಅಲ್ಲ ಎಂದು ಪರೋಕ್ಷವಾಗಿ ಸಿದ್ದರಾಮೋತ್ಸವಕ್ಕೆ ಟಾಂಗ್ ನೀಡಿದರು.