ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಪತ್ನಿ ಗೀತಾ ಶಿವ ರಾಜ್ಕುಮಾರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಹಾಗೂ ಸಹೋದರ ಮಧು ಬಂಗಾರಪ್ಪ ಸಮ್ಮುಖದಲ್ಲಿ ಗೀತಾ ಶಿವ ರಾಜ್ಕುಮಾರ್ ಕಾಂಗ್ರೆಸ್ ಸೇರಿದರು. ಈ ಹಿನ್ನೆಲೆ, ನಟ ರಾಘವೇಂದ್ರ ರಾಜ್ಕುಮಾರ್ ಹಾಗೂ ಬಿಜೆಪಿ ಪರ ಪ್ರಚಾರಕ್ಕಿಳಿದಿರುವ ನಟ ಸುದೀಪ್ ಅವರು ಗೀತಾ ಅವರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕೀಯದ ಬಗ್ಗೆ ಯಾವುದೇ ಮಾತನ್ನಾಡದೇ, ಶಿವ ರಾಜ್ಕುಮಾರ್ ನನ್ನ ಸಹೋದರ, ಅವರ ಪತ್ನಿ ಗೀತಾ ನಮ್ಮ ಅತ್ತಿಗೆ ಅಂತಾ ಹೇಳುವ ಮೂಲಕ ನಾವು ತಂದೆಯಂತೆ ರಾಜಕೀಯ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿಲ್ಲ ಎಂಬುದನ್ನ ಪರೋಕ್ಷವಾಗಿ ನಟ ರಾಘವೇಂದ್ರ ರಾಜ್ಕುಮಾರ್ ಹೇಳಿದರು. ನಟ ಸುದೀಪ್ ಗೀತಾ ಶಿವರಾಜ್ಕುಮಾರ್ ಅವರಿಗೆ ಶುಭ ಹಾರೈಸಿದ್ದಾರೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಸುದೀಪ್ ಅವರು, ಗೀತಾ ಅಕ್ಕನಿಗೆ ಒಳ್ಳೆಯದಾಗಲಿ ಎಂದು ಹೇಳಿದರು.
ಪತ್ನಿ ಗೀತಾ ಬಗ್ಗೆ ಮಾತನಾಡಿರೋ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್, ಇಂದು ಗೀತಾ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ನಾಳೆಯಿಂದ ಸೊರಬದಲ್ಲಿ ಪ್ರಚಾರಕ್ಕೆ ತೆರಳುತ್ತಾರೆ. ಅವರ ಜೊತೆ ನಾನೂ ತೆರಳುತ್ತಿದ್ದೇನೆ. ಸೊರಬದಲ್ಲಿ ಮಧು ಬಂಗಾರಪ್ಪ ಹಾಗೂ ಅವರ ಮಾವ ಭೀಮ ನಾಯಕ್ ಶಿರಸಿಯಲ್ಲಿ ಚುನಾವಣೆಗೆ ಸ್ಪರ್ಧಿಸುತಿದ್ದಾರೆ. ಇಬ್ಬರೂ ಗೆಲ್ಲಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಶಿವಣ್ಣ, ಬಂಗಾರಪ್ಪ ಅವರ ಮಕ್ಕಳಾದ ಮಧು ಹಾಗೂ ಗೀತಾರಿಗೆ ರಾಜಕೀಯ ಹೇಳಿಕೊಡೋದು ಬೇಡ. ಎರಡು ವರ್ಷದಿಂದ ಶಕ್ತಿ ಧಾಮದ ಪ್ರೆಸಿಡೆಂಟ್ ಆಗಿದ್ದಾರೆ ಗೀತಾ. ಮಕ್ಕಳ ಸ್ಕಿಲ್ ಡೆವಲಪ್ಮೆಂಟ್ಗೆ ಒತ್ತು ಕೊಡುತ್ತಿದ್ದಾರೆ. ಸಮಾಜಮುಖಿ ಕೆಲಸಗಳ ಬಗ್ಗೆ ಅವರಿಗೆ ಆಸಕ್ತಿ ಇದೆ ಎಂದು ಹೇಳಿದರು.