ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಬೆಂಗಳೂರು :ನಗರದ ಮೆಜೆಸ್ಟಿಕ್ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ತಲುಪಿದ್ದ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ. ರೈಲ್ವೆ ಇಂಜಿನ್ನಿಂದ ಹೊರ ಬಂದ ದಟ್ಟ ಹೊಗೆಯನ್ನು ಕಂಡ ಪ್ರಯಾಣಿಕರು ಕೆಲಕಾಲ ಆತಂಕಗೊಂಡಿದ್ದು, ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗ್ಗೆ 6ಕ್ಕೆ ಬೆಂಗಳೂರು ತಲುಪಿದ್ದ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಪ್ಲಾಟ್ ಫಾರ್ಮ್ 3ರಲ್ಲಿ ನಿಂತಿತ್ತು. 7:10ರ ಸುಮಾರಿಗೆ ರೈಲಿನ B1 ಹಾಗೂ B2 ಕೋಚ್ ಹಾಗೂ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿ ನೆರವಿನಿಂದ ಬೆಂಕಿ ನಂದಿಸಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲು ಬಂದು ನಿಂತ 2 ಗಂಟೆಗಳ ನಂತರ ಅವಘಡ ಸಂಭವಿಸಿದೆ. ಆದ್ದರಿಂದ ಪ್ರಯಾಣಿಕರು ಇರಲಿಲ್ಲ, ಹೀಗಾಗಿ ಭಾರಿ ಅವಘಡ ತಪ್ಪಿದೆ. ರೈಲು ರಾತ್ರಿ ವೇಳೆಗೆ ಇಲ್ಲಿಂದ ಹೊರಡುವುದಿತ್ತು. ಘಟನೆಗೆ ಕಾರಣ ಏನು ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
"ರೈಲ್ವೆ ನಿಲ್ದಾಣಕ್ಕೆ ಬೆಳಗ್ಗೆ ರೈಲು ಬಂದು ನಿಂತ ನಂತರ 7 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ರೈಲ್ವೆ ಫ್ಲಾಟ್ ಫಾರ್ಮ್ಗೆ ಬೆಳಗ್ಗೆ 6 ಗಂಟೆ ವೇಳೆಗೆ ಬಂದಿತ್ತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ರೈಲಿನಿಂದ ಇಳಿದು ಹೋಗಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂದು ಈಗಲೇ ಹೇಳಲು ಸಾಧ್ಯಲಿಲ್ಲ, ಸದ್ಯ ತನಿಖೆ ನಡೆಸುತ್ತಿದ್ದೇವೆ. ಸದ್ಯಕ್ಕೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎನ್ನುವ ಶಂಕೆಯಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ಸದ್ಯ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿಗೆ ಏನೂ ಸಮಸ್ಯೆ ಇಲ್ಲ, ಎರಡು ಬೋಗಿಗಳನ್ನು ಬದಲಿಸಲಾಗುತ್ತದೆ'' ಎಂದು ರಾಜ್ಯ ರೈಲ್ವೆ ಎಸ್ಪಿ ಡಾ. ಸೌಮ್ಯಲತಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಚಲಿಸುತ್ತಿದ್ದ ಅವಧ್ ಎಕ್ಸ್‌ಪ್ರೆಸ್ ರೈಲಿನ ಕಮೋಡ್‌ನಲ್ಲಿ ಸಿಲುಕಿದ ಬಾಲಕಿಯ ಕಾಲು..!