ಬೆಂಗಳೂರು :ಅತ್ಯಂತ ಅಪರೂಪದ ಪ್ರಕರಣದಲ್ಲಿ ಒಂದಾದ ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 45 ವರ್ಷದ ವ್ಯಕ್ತಿಗೆ ಕನಿಷ್ಠ ತೀವ್ರತೆಯ ವಿಧಾನವನ್ನು ಬಳಸಿ ಬಹು-ಒಳಾಂಗಗಳ ಶಸ್ತ್ರಚಿಕಿತ್ಸೆಯನ್ನ ಆಸ್ಟರ್ ಆರ್‌ವಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.
ಸಾಮಾನ್ಯವಾಗಿ ಈ ರೀತಿಯ ಶಸ್ತ್ರಚಿಕಿತ್ಸೆಗಳನ್ನು ತೆರೆದ ಛೇದನದ ಮೂಲಕ ನಡೆಸಲಾಗುತ್ತೆ. ಆದರೆ, ವೈದ್ಯರು, ಶೇಖರ್ (ಹೆಸರು ಬದಲಾಯಿಸಲಾಗಿದೆ) ಪ್ರಕರಣದಲ್ಲಿ ಲ್ಯಾಪರೊಸ್ಕೋಪಿಕ್ ತಂತ್ರವನ್ನು ಬಳಸಲು ನಿರ್ಧರಿಸಿದರು.
ಕರುಳಿನ ಕ್ಯಾನ್ಸರ್ ಜನರ ಮೇಲೆ ಪರಿಣಾಮ ಬೀರುವ ಮೂರು ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ವಿಶ್ವದಾದ್ಯಂತ ಸಾವಿಗೆ ಕಾರಣವಾಗುವ ಪ್ರಮುಖ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಭಾರತದಲ್ಲಿ ಸುಮಾರು 2 ಮಿಲಿಯನ್ ಕ್ಯಾನ್ಸರ್ ಸಂಬಂಧಿತ ಸಾವುಗಳು ಸಂಭವಿಸಿವೆ.
ಅಂದಹಾಗೇ, 45 ವರ್ಷದ ಶೇಖರ್, ಹೊಟ್ಟೆ ನೋವು ಮತ್ತು ಮಲದಲ್ಲಿ ರಕ್ತಸ್ರಾವದಂತಹ ರೋಗಲಕ್ಷಣಗಳನ್ನು ಹೊಂದಿದ್ದರು. ಜೊತೆಗೆ ದೇಹದ ತೂಕ ವೇಗವಾಗಿ ಕಡಿಮೆಯಾಗಲು ಹಾಗೂ ಆಹಾರ ಸೇವನೆಯ ನಂತರ ವಾಂತಿ ಮಾಡಲು ಪ್ರಾರಂಭಿಸುತ್ತಿದ್ದರು. ಬ್ಲಾಕ್‌ಗಳು ಮತ್ತು ಡ್ಯುವೋಡೆನಮ್ (ಸಣ್ಣ ಕರುಳಿನ ಮೊದಲ ಭಾಗ) ಸೇರಿದಂತೆ ಕರುಳಿನ ಕ್ಯಾನ್ಸರ್‌ಗೆ ಆಕ್ರಮಿಸುತ್ತಿರುವುದು ತಿಳಿದು ಬಂತು.
ಅವರಿಗೆ ಕಿಮೋಥೆರಪಿಗೆ ನಡೆಸಲಾಯಿತು ಮತ್ತು ನೇರವಾಗಿ ಕರುಳಿಗೆ ಆಹಾರ ಹೋಗುವಂತೆ ಒಂದು ಟ್ಯೂಬ್ ಅಳವಡಿಸಲಾಯಿತು. ಆದರೆ ಚಿಕಿತ್ಸೆಗೆ ಯಾವುದೇ ಪ್ರತಿಕ್ರಿಯೆ ಇರಲಿಲ್ಲ, ನಂತರ ಕೊನೆಯ ಆಯ್ಕೆಯಾಗಿ ಉಳಿದಿದ್ದು, ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯನ್ನು ತೆಗೆದು ಹಾಕುವುದು.
ಯಾವಾಗ ಕಿಮೋಥೆರಪಿಯಂತಹ ವಿಧಾನಗಳಲ್ಲಿ ಯಾವುದೇ ಬದಲಾವಣೆಗಳು ಆಗಲಿಲ್ವೋ, ಕ್ಯಾನ್ಸರ್ ಹರಡಿದ ಭಾಗಗಳನ್ನು ತೆಗೆದು ಹಾಕಲು ವೈದ್ಯರು ನಿರ್ಧರಿಸಿದ್ದರು. ಅಂತಹ ಸಂದರ್ಭಗಳಲ್ಲಿ ಬಹು-ಒಳಾಂಗಗಳ ಶಸ್ತ್ರಚಿಕಿತ್ಸೆಯ ಮುಖಾಂತರ ಮಾಡಿದರೆ ಅದು ರೋಗವನ್ನು ಗುಣಪಡಿಸಬಹುದು.
ಆದರೆ ಇದು ತಾಂತ್ರಿಕವಾಗಿ ತುಂಬಾ ಸವಾಲಿನ ಶಸ್ತ್ರಚಿಕಿತ್ಸೆಯಾಗಿದೆ. ನಮಗೆ ತಿಳಿದಿರುವಂತೆ, ಇದು ಅತ್ಯಂತ ವ್ಯಾಪಕವಾದ ಬಹು-ಒಳಾಂಗಗಳ ಲ್ಯಾಪರೊಸ್ಕೋಪಿಕ್ ಆಗಿದೆ. ಇದುವರೆಗೆ ವರದಿಯಾಗಿರುವಂತೆ, ಬಹುಶಃ ಭಾರತದಲ್ಲಿ ಇದು ಮೊದಲನೆಯದು, ಎಂದು ಆಸ್ಟರ್ ಆರ್‌ವಿ ಆಸ್ಪತ್ರೆಯ ಜನರಲ್ ಮತ್ತು ಜಿಐ ಸರ್ಜರಿ ವಿಭಾಗದ ಮುಖ್ಯ ತಜ್ಞ ಡಾ. ಗಿರೀಶ್ ಎಸ್ ಪಿ ಹೇಳಿದರು.
ಶಸ್ತ್ರಚಿಕಿತ್ಸೆಯನ್ನು 360 ನಿಮಿಷಗಳ ಅವಧಿಯಲ್ಲಿ (6 ಗಂಟೆಗಳ) ಕೇವಲ 250 ಮಿಲಿ ಲೀಟರ್ ರಕ್ತದ ನಷ್ಟದೊಂದಿಗೆ ನಡೆಸಲಾಯಿತು. ಕರುಳಿನ ಕ್ಯಾನ್ಸರ್ ರೋಗದ ಮೊದಲ ಹಂತದಲ್ಲೇ ಕಂಡು ಬಂದ್ರೆ ಹೆಚ್ಚಾಗಿ ಕಿಮೋಥೆರಪಿಯ ಮೂಲಕ ಚಿಕಿತ್ಸೆ ನೀಡಬಹುದು. ಕೆಲವು ಸಂದರ್ಭಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಸದ್ಯ, ಶೇಖರ್ ಆರೋಗ್ಯ ಉತ್ತಮವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಆರಂಭಿಕ ಹಂತದಲ್ಲಿ ಪತ್ತೆ ಮಾಡಿದ್ದರೆ, ಕರುಳಿನ ಕ್ಯಾನ್ಸರ್ ಗುಣಪಡಿಸಬಹುದಾದ ರೂಪಗಳಲ್ಲಿ ಒಂದಾಗಿದೆ. 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಅಥವಾ ಕರುಳಿನ ಕ್ಯಾನ್ಸರ್‌ಗೆ ಹೆಚ್ಚಿನ ಅಪಾಯದ ಗುಂಪಿನಲ್ಲಿದ್ದರೆ, ಪ್ರತಿ 3-5 ವರ್ಷಗಳಿಗೊಮ್ಮೆ ಕೊಲೊನೋಸ್ಕೋಪಿ ಮಾಡಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ.