ಕರ್ನಾಟಕ

karnataka

ETV Bharat / state

ಫ್ಲೋರ್‌ ಕ್ಲೀನರ್‌ ಕುಡಿದು ಅನ್ನನಾಳವನ್ನೇ ಕಳೆದು ಕೊಂಡಿದ್ದ 6 ವರ್ಷದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ - ಫೋರ್ಟಿಸ್‌ ಆಸ್ಪತ್ರೆ

ಫ್ಲೋರ್‌ ಕ್ಲೀನರ್‌ ಕುಡಿದು ಅನ್ನನಾಳವನ್ನೇ ಕಳೆದುಕೊಂಡಿದ್ದ 6 ವರ್ಷದ ಮಗುವಿಗೆ ವೈದ್ಯರು ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ ಅನ್ನನಾಳವನ್ನು ಪುನರ್‌ ನಿರ್ಮಾಣ ಮಾಡಿದ್ದಾರೆ.

Successful surgery for 6 year girl
6 ವರ್ಷದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

By

Published : Jul 24, 2023, 10:19 PM IST

ಬೆಂಗಳೂರು: ಆಕಸ್ಮಿಕವಾಗಿ ಫ್ಲೋರ್‌ ಕ್ಲೀನರ್‌ ಲಿಕ್ವಿಡ್‌ ಕುಡಿದು ಅನ್ನನಾಳವೇ ಸಂಪೂರ್ಣವಾಗಿ ಸುಟ್ಟು ಹೋಗಿದ್ದ 6 ವರ್ಷದ ಬಾಲಕಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ ಅನ್ನನಾಳವನ್ನು ಪುನರ್‌ ನಿರ್ಮಾಣ ಮಾಡಿದ್ದಾರೆ. ಫೋರ್ಟಿಸ್‌ ಆಸ್ಪತ್ರೆಯ ಚೀಫ್ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ. ಮನೀಶ್ ಜೋಶಿ ಅವರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ವೈದ್ಯರು ಹೇಳಿದ್ದು ಹೀಗೆ.. ಈ ಕುರಿತು ಮಾತನಾಡಿದ ಡಾ.ಮನೀಶ್ ಜೋಶಿ, 6 ವರ್ಷದ ಪುಟ್ಟ ಬಾಲಕಿಯು ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಫ್ಲೋರ್‌ ಕ್ಲೀನರ್‌ ಲಿಕ್ವಿಡ್​ ಅನ್ನು ಆಕಸ್ಮಿಕವಾಗಿ ಸೇವಿಸಿದೆ. ಇದರಿಂದ ಮಗುವಿನ ಅನ್ನನಾಳ ಹಾಗೂ ಸಣ್ಣ ಕರುಳಿನ ಒಂದು ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅನ್ನನಾಳ ಹಾಗೂ ಸಣ್ಣ ಕರುಳು ಸಂಪೂರ್ಣ ಸುಟ್ಟು ಹೋದ ಪರಿಣಾಮ ಹಾನಿಗೊಳಗಾದ ಆಹಾರ ಪೈಪ್‌ನ ಒಂದು ಭಾಗವನ್ನು ತೆಗೆದು, ಟ್ಯೂಬ್ ಮೂಲಕ ಅವಳ ಸಣ್ಣ ಕರುಳಿಗೆ ನೇರವಾಗಿ ಆಹಾರವನ್ನು ನೀಡಲು ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು.

ಇದನ್ನೂ ಓದಿ:ಗುಜರಾತ್​: ಹಿಮ್ಮತ್​​ನಗರದ ಖಾಸಗಿ ಆಸ್ಪತ್ರೆಯಲ್ಲಿ 2 ಮೂಗಿನ ಮಗು ಜನನ

ಅನ್ನನಾಳ ಪುನರ್​ ನಿರ್ಮಾಣ: ಕಳೆದ ಎರಡು ವರ್ಷಗಳಿಂದ ಮಗುವಿನ ದೇಹದ ಹೊರಭಾಗದಿಂದ ಹೆಚ್ಚುವರಿಯಾಗಿ ಫೀಡಿಂಗ್‌ ಟ್ಯೂಬ್‌ ಅಳವಡಿಸಿದ್ದು, ಅದರ ಸಹಾಯದಿಂದಲೇ ಆಹಾರ ಸೇವನೆ ಮಾಡಬೇಕಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದೂ ಸಹ ಮಗುವಿಗೆ ಕಷ್ಟವಾಗುತ್ತಿತ್ತು. ಹೀಗಾಗಿ ಫೋರ್ಟಿಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಓಸೊಫಾಗೊ- ಗ್ಯಾಸ್ಟ್ರೋ- ಡ್ಯುಯೊಡೆನೊಸ್ಕೋಪಿಗೆ ಒಳಪಡಿಸಿ, ಮೇಲ್ಭಾಗದ ಜೀರ್ಣಾಂಗ ವ್ಯವಸ್ಥೆಯನ್ನು ಮೈಕ್ರೋ ಕ್ಯಾಮರಾದ ಮೂಲಕ ಪರೀಕ್ಷಿಸಲಾಯಿತು. ಇದರಿಂದ ಮಗುವಿನ ಅನ್ನನಾಳ ಹಾಗೂ ಸಣ್ಣಕರುಳು ಸುಟ್ಟ ಪರಿಣಾಮ ತೀರ ಕಿರಿದಾಗಿತ್ತು.

ಹೀಗಾಗಿ ಅನ್ನನಾಳದ ಪುನರ್‌ ನಿರ್ಮಾಣಕ್ಕೆ ಮಕ್ಕಳ ತಜ್ಞರು ಹಾಗೂ ಗ್ಯಾಸ್ಟ್ರೋ ಎಂಟರಾಲಜಿಸ್ಟ್‌ಗಳು, ಅರವಳಿಕೆ ತಜ್ಞರ ಸಹಕಾರದೊಂದಿಗೆ ಮಗುವಿನ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಯಿತು. ಈಗಾಗಲೇ ಸಂಪೂರ್ಣವಾಗಿ ಸುಟ್ಟು, ಕಿರಿದಾಗಿದ್ದ ಅನ್ನನಾಳವನ್ನು ತೆರವುಗೊಳಿಸಿ, ಟ್ಯೂಬ್‌ನನ್ನು ನೇರವಾಗಿ ಮಗುವಿನ ಸಣ್ಣ ಕರುಳಿಗೆ ಅಳವಡಿಸಲಾಗಿದ್ದು, ಈ ಮೂಲಕ ಅನ್ನನಾಳವನ್ನು ಮರು ನಿರ್ಮಾಣ ಮಾಡಲಾಗಿದೆ. ಇದರಿಂದ ಇದೀಗ ಮಗುವು ಯಾವುದೇ ಟ್ಯೂಬ್‌ ಇಲ್ಲದೆಯೂ ಸಹ ಆಹಾರವನ್ನು ಬಾಯಿಯ ಮೂಲಕ ಸೇವಿಸಬಹುದಾಗಿದೆ.

ಮಕ್ಕಳಿಗೆ ಫ್ಲೋರ್‌ ಕ್ಲೀನರ್‌ ಲಿಕ್ವಿಡ್​ನಂತಹ ಯಾವುದೇ ವಸ್ತುಗಳು ಕೈಗೆ ಸಿಗದಂತೆ ಜಾಗೃತೆ ವಹಿಸುವುದು ಅತಿ ಮುಖ್ಯ. ಈ ಬಗ್ಗೆ ಪೋಷಕರು ಆದಷ್ಟು ಜಾಗೃತಿ ವಹಿಸಬೇಕು ಎಂಬುದು ನಮ್ಮ ಮನವಿ.

ಇದನ್ನೂ ಓದಿ:ಬೆನ್ನಿಗೆ ಹೊಕ್ಕಿದ್ದ ಆರು ಇಂಚು ಉದ್ದದ ಚಾಕು ಹೊರಕ್ಕೆ: ಏಮ್ಸ್​ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ABOUT THE AUTHOR

...view details