ಕರ್ನಾಟಕ

karnataka

ETV Bharat / state

ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಚನ್ನಪಟ್ಟಣ ಗೊಂಬೆಗಳ ಮಾರಾಟ ಯಶಸ್ವಿ: ಯೋಜನೆ ವಿಸ್ತರಣೆಗೆ ನಿರ್ಧಾರ

ಬೆಂಗಳೂರಿನ ಕೆಎಸ್​ಆರ್​ ರೈಲು ನಿಲ್ದಾಣದಲ್ಲಿ ಚನ್ನಪಟ್ಟಣ ಗೊಂಬೆಗಳ ಮಾರಾಟ ಯಶಸ್ವಿಯಾದ ಬೆನ್ನಲ್ಲೆ ಯೋಜನೆಯನ್ನು ವಿಸ್ತರಿಸಲು ರೈಲ್ವೆ ಇಲಾಖೆ ಮುಂದಾಗಿದೆ.

By ETV Bharat Karnataka Team

Published : Dec 9, 2023, 6:49 AM IST

ಚನ್ನಪಟ್ಟಣ ಗೊಂಬೆಗಳ ಮಾರಾಟ ಯಶಸ್ವಿ
ಚನ್ನಪಟ್ಟಣ ಗೊಂಬೆಗಳ ಮಾರಾಟ ಯಶಸ್ವಿ

ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ ವಿಶ್ವ ವಿಖ್ಯಾತ ಚನ್ನಪಟ್ಟಣದ ಗೊಂಬೆಗಳ ಮಾರಾಟ ಯಶಸ್ವಿಯಾದ ಹಿನ್ನೆೆಲೆಯಲ್ಲಿ ರೈಲು ನಿಲ್ದಾಣದಲ್ಲಿ ಶಾಶ್ವತವಾಗಿ ಗೊಂಬೆಗಳ ಮಾರಾಟ ಮಳಿಗೆ ತೆರೆಯಲು ಮತ್ತು ಈ ಸೌಲಭ್ಯವನ್ನು ಹಲವು ನಿಲ್ದಾಣಗಳಿಗೆ ವಿಸ್ತರಿಸಲು ರೈಲ್ವೆ ಇಲಾಖೆ ಮುಂದಾಗಿದೆ.

2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತ ಅಭಿಯಾನದಡಿ ಘೋಷಿಸಲಾಗಿದ್ದ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಸಂಸ್ಥೆೆಗಳ ಉತ್ಪನ್ನಗಳನ್ನು ಮಾರಾಟ ಮಾಡಲು ಭಾರತೀಯ ರೈಲ್ವೆೆ ಮುಂದಾಗಿತ್ತು. ಈ ಯೋಜನೆಯಡಿ ಪ್ರತಿಭಾವಂತ ಸ್ಥಳೀಯ ಕುಶಲಕರ್ಮಿಗಳು ಮತ್ತು ಅವರ ಕರಕುಶಲ ವಸ್ತುಗಳನ್ನು ಮಾರಾಟ ಮಾಡಿ ಅವರನ್ನು ಸಬಲೀಕರಣಗೊಳಿಸುವ ಸಲುವಾಗಿ, ಕೆ.ಎಸ್.ಆರ್ ರೈಲು ನಿಲ್ದಾಣದಲ್ಲೂ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಕಿಯೋಸ್ಕ್​ನಲ್ಲಿ ಪರಿಸರ ಸ್ನೇಹಿ ಮತ್ತು ವರ್ಣರಂಜಿತ ಚನ್ನಪಟ್ಟಣದ ಆಟಿಕೆಗಳ ಮಾರಾಟ ಆರಂಭವಾಗಿತ್ತು. ಇದೀಗ ಬೇಡಿಕೆ ಹೆಚ್ಚಾಗಿರುವ ಹಿನ್ನೆೆಲೆಯಲ್ಲಿ ಶಾಶ್ವತ ಮಳಿಗೆ ಸ್ಥಾಪಿಸಲು ಮತ್ತು ಬೆಂಗಳೂರು ವಿಭಾಗದ ಹಲವು ನಿಲ್ದಾಣಗಳಲ್ಲಿ ಚನ್ನಪ್ಪಟಣದ ಗೊಂಬೆಗಳು ಮತ್ತು ರಾಜ್ಯದ ಇತರ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.

ಗುರುತಿಸಲಾದ ರೈಲ್ವೆೆ ನಿಲ್ದಾಣಗಳಲ್ಲಿ ಸ್ಟಾಲ್, ಕಿಯೋಸ್ಕ, ಮಾರಾಟ ಮಳಿಗೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, ಅವರ ಕೌಶಲ್ಯ ಮತ್ತು ಜೀವನೋಪಾಯವನ್ನು ಸುಧಾರಿಸಲು ಸ್ಥಳೀಯ ತಯಾರಕರಿಂದ ಪಡೆದ ವಸ್ತುಗಳ ಮಾರಾಟ ಮತ್ತು ಪ್ರಚಾರಕ್ಕಾಗಿ ಗುರುತಿಸಲಾಗಿದೆ. ಆಯಾ ಪ್ರದೇಶ, ಪ್ರದೇಶಕ್ಕೆೆ ಸ್ಥಳೀಯವಾದ ಒಂದು ಉತ್ಪನ್ನ ಗುರುತಿಸಿ ಮತ್ತು ಮಾರಾಟಕ್ಕಾಗಿ ನಿಲ್ದಾಣದಲ್ಲಿ ಸ್ಥಳವನ್ನು ನಿಗದಿಪಡಿಸಲು ಯೋಜಿಸಲಾಗುತ್ತಿದೆ. ಒಂದು ನಿಲ್ದಾಣ ಒಂದು ಉತ್ಪನ್ನ ಪರಿಕಲ್ಪನೆಯು ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಒದಗಿಸುವ ಮೂಲಕ ಭಾರತದ ಸ್ಥಳೀಯ ಮತ್ತು ವಿಶೇಷ ಉತ್ಪನ್ನಗಳು ಮತ್ತು ಕರಕುಶಲಗಳನ್ನು ಉತ್ತೇಜಿಸಲಾಗುತ್ತಿದೆ.

ಉತ್ಪನ್ನಗಳು ಆ ಸ್ಥಳಕ್ಕೆೆ ನಿರ್ದಿಷ್ಟವಾಗಿರುತ್ತವೆ ಮತ್ತು ಸ್ಥಳೀಯ ಬುಡಕಟ್ಟುಗಳಿಂದ ತಯಾರಿಸಿದ ಕಲಾಕೃತಿಗಳು, ಸ್ಥಳೀಯ ನೇಕಾರರಿಂದ ಕೈಮಗ್ಗಗಳು, ವಿಶ್ವ ಪ್ರಸಿದ್ಧ ಮರದ ಕೆತ್ತನೆಗಳಂತಹ ಕರಕುಶಲ ವಸ್ತುಗಳು, ಬಟ್ಟೆಗಳ ಮೇಲೆ ಚಿಕಂಕರಿ ಮತ್ತು ಝರಿ-ಜರ್ಡೋಜಿ ಕೆಲಸ, ಅಥವಾ ಮಸಾಲೆ ಚಹಾ, ಕಾಫಿ ಮತ್ತು ಇತರ ಸಂಸ್ಕರಿಸಿದ, ಅರೆ ಸಂಸ್ಕರಿಸಿದ ಆಹಾರಗಳನ್ನು ಒಳಗೊಂಡಿರುತ್ತದೆ. ನಮ್ಮ ವಿಭಾಗದಲ್ಲೂ ಚನ್ನಪಟ್ಟಣದ ಮರದ ಗೊಂಬೆಗಳಿಗೆ ಮತ್ತು ರಾಜ್ಯದ ಇತರ ಕರಕುಶಲ ವಸ್ತುಗಳ ಮಾರಾಟಕ್ಕೆ ಇನ್ನಷ್ಟು ಉತ್ತಮ ವೇದಿಕೆಯನ್ನು ಕಲ್ಪಿಸಲು ಮುಂದಾಗುತ್ತಿದ್ದೇವೆ ಎಂದು ಅಡಿಶನಲ್ ಡಿವಿಷನಲ್ ರೈಲ್ವೆ ಮ್ಯಾನೇಜರ್ ಕುಸುಮಾ ಹರಿಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಸುರಕ್ಷಿತ ರಸ್ತೆ ನಿರ್ಮಿಸಲು 'ನಮ್ಮ ರಸ್ತೆ' ಪ್ರದರ್ಶನ ಕಾರ್ಯಾಗಾರ

ABOUT THE AUTHOR

...view details