ಯಲಹಂಕ(ಬೆಂಗಳೂರು):ಹಿಂದೆ ಗೋವುಗಳನ್ನು ರಾಜ್ಯ ಮತ್ತು ಸಾಮ್ರಾಜ್ಯಗಳ ಸಂಪತ್ತಾಗಿ ಪರಿಗಣಿಸಲಾಗಿತ್ತು. ಆದರೆ ಇದೀಗ ಆಧುನೀಕತೆ ಬೆಳೆದಂತೆ ಸಿಲಿಕಾನ್ ಸಿಟಿ ಬೆಂಗಳೂರು ಸುತ್ತಮುತ್ತಲ ಜನ ಐಟಿ-ಬಿಟಿ ಕ್ಷೇತ್ರಗಳತ್ತ ಆಕರ್ಷಿತರಾದರು. ಈ ಏಳುಬೀಳಿನ ನಡುವೆ ಹಾಲು ಉತ್ಪಾದನೆ ಹಳ್ಳಿ ರೈತನ ಕೈ ಹಿಡಿದಿದೆ. ಕೊರೊನಾ ಭೀತಿಯಲ್ಲೂ ಹಸಿದಿದ್ದ ಅನ್ನದಾತನ ಹೊಟ್ಟೆ ತುಂಬಿದೆ. ಹಳ್ಳಿಗಾಡಿನ ರೈತರಿಗೆ ಹೈನುಗಾರಿಕೆ ಅಕ್ಷಯ ಪಾತ್ರೆಯಾಗಿದೆ.
ರೈತನನ್ನು ದೇಶದ ಬೆನ್ನಲುಬು ಅಂತಾರೆ. ಅದೇ ರೀತಿ ಹಳ್ಳಿ ಕುಟುಂಬಗಳಲ್ಲಿ ಹಸುಗಳು ಕುಟುಂಬದ ಬೆನ್ನೆಲುಬು ಅನ್ನೋದು ಅಷ್ಟೇ ಸತ್ಯ. ಮನೆಗೊಂದು ಹಸು ಇದ್ದರೆ ಅದು ಆದಾಯದ ಬ್ಯಾಂಕ್ ಇದ್ದಂತೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಸ್ಥಿರ ಬೆಲೆ ಸಮಸ್ಯೆಯಿಂದ ವಾಣಿಜ್ಯ ಬೆಳೆ ರೈತನ ಕೈ ಸುಟ್ಟರೂ ಹಾಲು ರೈತನ ಜೇಬು ತುಂಬುತ್ತದೆ.
ಹೈನುಗಾರಿಕೆಯಿಂದ ರೈತನ ಬದುಕು ಹಸನು.. ಒಂದೋ, ಎರಡೋ ಹಸು ಕಟ್ಟಿಕೊಂಡರೆ ತಿಂಗಳಿಗೆ ಎರಡು ಕಂತಲ್ಲಿ ಸಂಬಳದ ರೂಪದಲ್ಲಿ ಹಣ ರೈತನ ಬ್ಯಾಂಕಿಗೆ ನೇರವಾಗಿ ಬಂದು ಬೀಳುತ್ತದೆ. ಇರುವ ಹುಲ್ಲು, ಹಿಂಡಿ, ಬೂಸಾ ಸಂಪನ್ಮೂಲಗಳಲ್ಲೇ ಹಳ್ಳಿಗಾಡಿನ ರೈತ ಹಸು ಸಾಕಿ ಹಾಲು ಹಾಕಿ ನೆಮ್ಮದಿ ಜೀವನ ಸಾಗಿಸುತ್ತಿದ್ದಾನೆ.
ಹಾಲು ಉತ್ಪಾದಕರಿಗೆ ಪ್ರೋತ್ಸಾಹ:ಬೆಂಗಳೂರು ನಗರ ಜಿಲ್ಲೆಯ ಹಾಲು ಒಕ್ಕೂಟ ಬಮುಲ್ ಮತ್ತು ಸರ್ಕಾರ ಹಾಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ನಗರ ಮತ್ತು ಗ್ರಾಮೀಣ ಭಾಗದ ಮಿಶ್ರ ಸಂಸ್ಕೃತಿಗಳ ಸಂಗಮ ಯಲಹಂಕ ತಾಲೂಕಿನಲ್ಲಿ 186 ಹಾಲು ಉತ್ಪಾದಕ ಸಹಕಾರ ಸಂಘಗಳಿವೆ.
ಹೆಸರಘಟ್ಟ, ಜಾಲ, ದಾಸನಪುರ, ಯಲಹಂಕ, ಯಶವಂತಪುರ, ಮಧುರೆ ಹೋಬಳಿಗಳ 186 ಡೈರಿಗಳಿಂದ ಪ್ರತಿದಿನ 1,26, 000 ಲೀ. ಹಾಲು ಉತ್ಪಾದನೆಯಾಗುತ್ತಿದೆ. ಪ್ರತಿ ವರ್ಷ ಕೋಟ್ಯಂತರ ರೂ. ಆದಾಯ ಸಿಗುತ್ತಿದೆ. ಅರ್ಧ ಖರ್ಚಾದರೂ, ಇನ್ನರ್ಧ ಲಾಭವೇ. ಬಮುಲ್ ಮತ್ತು ಸರ್ಕಾರ ಲೀಟರ್ಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಈ ಎಲ್ಲಾ ರೀತಿಯ ನೆರವು ಹಾಲು ಉತ್ಪಾದಕರ ಯಶಸ್ಸಿಗೆ ದಾರಿಯಾಗಿದೆ ಎನ್ನುತ್ತಾರೆ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು.
ಗ್ರಾಮೀಣ ಜನರ ಬದುಕಿಗೆ ಆಸರೆ:ಹಳ್ಳಿಗಾಡಿನ ರೈತರು ಕೃಷಿ ಜತೆ ಹೈನುಗಾರಿಕೆಯನ್ನು ಉಪ ಕಸುಬನ್ನಾಗಿಸಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಯಲಹಂಕ ತಾಲೂಕಿನಲ್ಲಿ 15 ಮಹಿಳಾ ಸಹಕಾರ ಸಂಘ ಯಶಸ್ವಿಯಾಗಿ ನಡೆಯುತ್ತಿವೆ. ಅಂತೂ ಗ್ರಾಮೀಣ ಮತ್ತು ನಗರ ಪ್ರದೇಶಗಳೆನ್ನದೆ ಹೈನೋದ್ಯಮ ಗ್ರಾಮೀಣ ಜನರ ಆರ್ಥಿಕ ಬದುಕಿಗೆ ಆಸರೆಯಾಗಿದೆ.
ಇದನ್ನೂ ಓದಿ:ಹೈನುಗಾರಿಕೆ ಮೇಲೀನ ಪ್ರೀತಿ: 70ಕ್ಕೂ ಅಧಿಕ ಗೋವುಗಳ ಆರೈಕೆಯಲ್ಲಿ ತೊಡಗಿದ ಉದ್ಯಮಿ