ಬೆಂಗಳೂರು:ಕೃಷಿ ಭೂಮಿ ಖರೀದಿ ಸುಗಮಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತ್ತು. ಸಾಕಷ್ಟು ಪ್ರತಿರೋಧದ ಮಧ್ಯೆ ಕಾಯ್ದೆಯನ್ನು ಕಾರ್ಯರೂಪಕ್ಕೆ ತರಲಾಗಿತ್ತು. ಇದೀಗ ಹೊಸ ತಿದ್ದುಪಡಿ ಕಾಯ್ದೆಯಡಿ ಕೃಷಿ ಭೂಮಿ ಖರೀದಿ ವಹಿವಾಟು ಹೆಚ್ಚಳವಾಗಿದೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ ವಿವಾದಿತ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿತ್ತು. ಪ್ರತಿಪಕ್ಷ ಹಾಗೂ ರೈತರ ತೀವ್ರ ವಿರೋಧದ ಮಧ್ಯೆ ಬಿಜೆಪಿ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿತ್ತು. ಕೃಷಿ ಭೂಮಿ ಮಾರಾಟದ ನಿಯಮವನ್ನು ಸಡಿಲಗೊಳಿಸಿ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಆ ಮೂಲಕ ಕೃಷಿ ಭೂಮಿ ಖರೀದಿಗಾಗಿ ಇದ್ದ ಆದಾಯ ಮಿತಿ ತೆಗೆದು ಹಾಕಲಾಗಿತ್ತು.
ಕಳೆದ ಸೆಪ್ಟೆಂಬರ್ನಲ್ಲಿ ಬಿಜೆಪಿ ಸರ್ಕಾರ ಈ ವಿವಾದಿತ ಕಾಯ್ದೆಯನ್ನು ಕಾರ್ಯರೂಪಕ್ಕೆ ತಂದಿತ್ತು. ಕೃಷಿಯೇತರರು ಕೃಷಿ ಭೂಮಿ ಖರೀದಿಸಲು ಅನುವು ಮಾಡುವ ಕಾಯ್ದೆ ಇದಾಗಿದೆ. ಕಳೆದ ವರ್ಷದ ಲಾಕ್‌ಡೌನ್ ಬಳಿಕ ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆಗಳಿಗೆ ಕೆಲ ತಿದ್ದುಪಡಿ ತಂದಿತ್ತು. ಅದರಲ್ಲಿ ಕೃಷಿ ಭೂಮಿ ಖರೀದಿಗಾಗಿನ ಕಠಿಣ ನಿಯಮವನ್ನು ಸಡಿಲಗೊಳಿಸಲಾಗಿತ್ತು. ಈ ಭೂ ಸುದಾರಣಾ ತಿದ್ದುಪಡಿ ಕಾಯ್ದೆಯಿಂದ ಕೃಷಿ ಭೂಮಿ ಖರೀದಿ, ಮಾರಾಟ ವಹಿವಾಟಿನಲ್ಲಿ ಗಣನೀಯ ಏರಿಕೆ ಕಂಡಿದೆ.
ಕೃಷಿ ಭೂಮಿ ವಹಿವಾಟಿನಲ್ಲಿ ಗಣನೀಯ ಏರಿಕೆ:
ಕಳೆದ ಏಳೆಂಟು ತಿಂಗಳಿಂದ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿ, ಮಾರಾಟ ವಹಿವಾಟು ಹೆಚ್ಚಾಗಿದೆ. ಹೊಸ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ವಹಿವಾಟಿನಲ್ಲಿ ಗಣನೀಯ ಏರಿಕೆ ಕಂಡಿದೆ. ಕೃಷಿ ಭೂಮಿ ನೋಂದಣಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಸರ್ಕಾರ ಆದಾಯದಲ್ಲೂ ಹೆಚ್ಚಳವಾಗುತ್ತಿದೆ.
ಕಂದಾಯ ಇಲಾಖೆಯ ಆಂತರಿಕ ವರದಿ ಪ್ರಕಾರ ಕೃಷಿ ಭೂಮಿ ಮಾರಾಟ, ಖರೀದಿ ವಹಿವಾಟಿನಲ್ಲಿ ಏರಿಕೆ ಕಂಡಿದೆ. ವರದಿ ಪ್ರಕಾರ ಸುಮಾರು 67ರಷ್ಟು ಕೃಷಿ ಭೂಮಿ ವಹಿವಾಟಿನಲ್ಲಿ ಏರಿಕೆ ಕಂಡಿದೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಕಾರ್ಯರೂಪಕ್ಕೆ ಬರುವ ಮುನ್ನ ಅಲ್ಪ ನೋಂದಣಿ ಕಂಡು ಬರುತ್ತಿತ್ತು. ಆದರೆ, ಕಾಯ್ದೆ ಜಾರಿಗೆ ಬಂದ ಬಳಿಕ ಮುದ್ರಾಂಕ ಹಾಗೂ ನೋಂದಣಿ ಶುಲ್ಕದಲ್ಲಿ ಸುಮಾರು ಶೇ127ರಷ್ಟು ಏರಿಕೆ ಕಂಡಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಮೇ ಹಾಗೂ ಜೂನ್ನಲ್ಲಿ ಲಾಕ್‌ಡೌನ್ ಇದ್ದರೂ ಕೃಷಿ ಭೂಮಿ ನೋಂದಣಿಯಲ್ಲಿ ಏರಿಕೆ ಕಂಡಿದೆ. ಹೀಗಾಗಿ ಕಳೆದ ಏಳೆಂಟು ತಿಂಗಳಿಂದ ಆದಾಯ ಸಂಗ್ರಹದಲ್ಲಿ ಗಣನೀಯ ಏರಿಕೆ ದಾಖಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಕಂದಾಯ ಇಲಾಖೆಯ ಆಂತರಿಕ ವರದಿಯಲ್ಲಿ ಕೃಷಿ ಭೂಮಿ ನೋಂದಣಿಯಲ್ಲಿ ಏರಿಕೆಯಾಗಿದ್ದು, ಅದರ ಫಲವಾಗಿ ಆದಾಯ ಸಂಗ್ರಹದಲ್ಲಿ ಚೇತರಿಕೆಯಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.