ಬೆಂಗಳೂರು:''ಕಳೆದ ಮೂರು ವರ್ಷಗಳಿಂದ ಬೆಂಗಳೂರಲ್ಲಿ ವಿಧಾನಸಭೆ ಕ್ಷೇತ್ರವಾರು ಆಗಿರುವ ಕೆಲಸ, ಯಾವ ಯೋಜನೆಯಡಿ ಕೆಲಸ ಆಗಿದೆ. ಅದಕ್ಕೆ ಆಗಿರುವ ಖರ್ಚಿನ ವಿವರ ಮತ್ತು ಕೆಲಸ ಆಗಿರುವ ಬಗ್ಗೆ ಫೋಟೋ, ವಿಡಿಯೋ ಮತ್ತಿತರ ದಾಖಲೆಗಳನ್ನು ಸರಕಾರಕ್ಕೆ ಒದಗಿಸಬೇಕು'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ''ಬಿಬಿಎಂಪಿ ಅನುದಾನ ಪಡೆದು ಶುರು ಮಾಡದ ಕೆಲಸ, ಕಾಮಗಾರಿಗಳನ್ನು ಯತಾಸ್ಥಿತಿ ಕಾಪಾಡಿ. ಕಾಲಮಿತಿಯೊಳಗೆ ಪೂರ್ಣಗೊಳಿಸದ ಯೋಜನೆ ಕಾರ್ಯಗಳನ್ನು ತಡೆ ಹಿಡಿಯಬೇಕು. ಯಾವ ಯಾವ ಕಾಮಗಾರಿಗಳ ಕಾರ್ಯವಾಗಿದ್ದರೂ ಬಿಲ್ ಮಾಡಲಾಗಿದೆ. ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಮಾಡಲಾಗಿದೆ. ಒಂದೇ ಕಾಮಗಾರಿಗೆ ಎರಡು ಕಂಪನಿಗಳಿಂದ ಬಿಲ್ ಆಗಿದೆ ಎಂಬ ಬಗ್ಗೆ ತನಿಖೆ ಮಾಡಿ, 10 ದಿನದೊಳಗೆ ಪಟ್ಟಿ ನೀಡಬೇಕು'' ಎಂದು ಅವರು ತಾಕೀತು ಮಾಡಿದರು.
''ನಿಮ್ಮ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಿ ನೋಡಲಾಗುತ್ತದೆ. ನೀವು ಪಟ್ಟಿ ಕೊಡದಿದ್ದರೆ ನಾನೇ ನಿಮಗೆ ಪಟ್ಟಿ ಕೊಡುತ್ತೇನೆ. ನಾನು ಹಳ್ಳಿಯಿಂದ ಬಂದಿದ್ದರೂ ನನಗೆ ಈ ಬಗ್ಗೆ ಮಾಹಿತಿ ಕೊಡುವವರು ಇದ್ದಾರೆ. ಮಾಹಿತಿ ಪಡೆಯುವ ಶಕ್ತಿಯೂ ನನಗಿದೆ. ಕೆಲಸ ಆಗಿರುವ ಜಾಗಗಳಿಗೆ ಹೋಗಿ ಖುದ್ದು ಪರಿಶೀಲನೆ ಮಾಡೋಣ. ಕಣ್ಣಲ್ಲಿ ಕಂಡಿದ್ದು, ಮಾತ್ರವೇ ನಂಬಿಕೆಗೆ ಅರ್ಹ. ಹೀಗಾಗಿ ಕಣ್ಣಲ್ಲಿ ನೋಡಿ ನಂಬೋಣ'' ಎಂದು ಹೇಳಿದರು.
ಪಾಲಿಕೆಯಲ್ಲಿ ಎಂಜಿನಿಯರ್ಗಳು ಇರುವುದು ಯಾವುದಕ್ಕೆ- ಡಿಕೆಶಿ ಗರಂ:''ರಸ್ತೆ ಮತ್ತಿತರ ಕಾಮಗಾರಿಗಳನ್ನು ಏಜೆನ್ಸಿಗಳ ಮೂಲಕವೇ ಮಾಡುವುದಾದರೆ ಪಾಲಿಕೆಯಲ್ಲಿ ಎಂಜಿನಿಯರ್ಗಳು ಇರುವುದು ಯಾವುದಕ್ಕೆ. ನಿಮ್ಮ ಕೆಲಸವನ್ನು ಬೇರೆ ಯಾರೋ ಮಾಡುವುದಾದರೆ ನೀವು ಇರುವುದಾದರೂ ಏಕೆ'' ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ''ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೊರವಲಯದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಅವಕಾಶ ಕಲ್ಪಿಸಬಾರದು. ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ದಂಡ ಮತ್ತಿತರ ಕಾನೂನು ಕ್ರಮ ಜರುಗಿಸಬೇಕು. ಒಣ ಮತ್ತು ಹಸಿ ಕಸ ವೈಜ್ಞಾನಿಕ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು'' ಎಂದು ತಾಕೀತು ಮಾಡಿದರು.
''ಅಕ್ರಮಗಳಿಗೆ ಆಸ್ಪದ ಇಲ್ಲದಂತೆ ಟಿಡಿಆರ್ ಯೋಜನೆ ಜಾರಿಗೆ ತರಬೇಕು. ರಸ್ತೆ ಮತ್ತಿತರ ಯೋಜನೆಗಳಿಗೆ ಆಸ್ತಿ ಕಳೆದುಕೊಂಡವರ ಹಿತ ಕಾಯಬೇಕು. ಯಾವುದೇ ಯೋಜನೆ ಕಾಮಗಾರಿ ಆರಂಭಕ್ಕೆ ಮುನ್ನ ಆ ಜಾಗದ ವಿಡಿಯೋ, ಫೋಟೋ ತೆಗೆಯಬೇಕು. ನಿಜವಾಗಿಯೂ ಜನರ ಉಪಯೋಗಕ್ಕೆ ಆ ಯೋಜನೆ ಬರುತ್ತಿದೆಯೇ ಅಥವಾ ಇನ್ಯಾರಾದರೂ ಪ್ರಭಾವಿಗಳ ಅನುಕೂಲಕ್ಕೆ ಆ ಯೋಜನೆ ಆಗುತ್ತಿದೆಯೋ ಎಂಬ ಮಾಹಿತಿ ಸಾರ್ವಜನಿಕರಿಗೆ ಸಿಗುವಂತಾಗಬೇಕು'' ಎಂದು ಸಲಹೆ ನೀಡಿದರು.