ಕರ್ನಾಟಕ

karnataka

ETV Bharat / state

ನಕಲಿ ನಿರಪೇಕ್ಷಣಾ ಪತ್ರ ಪ್ರಕರಣದ ಬಗ್ಗೆ ಪೊಲೀಸರ ತನಿಖೆ : ಸಾಂದೀಪಿನಿ ಶಾಲೆ ಮುಖ್ಯಸ್ಥರಿಂದ ದಾಖಲೆ ಸಲ್ಲಿಕೆ - ಲೋಕೇಶ್ ತಾಳಿಕಟ್ಟಿ ಬಂಧನ

ಶಾಲೆ ಬಗ್ಗೆ ದೂರಿನ ಬಳಿಕ ಪೊಲೀಸರು ನನ್ನನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಇದನ್ನೇ ಬಂಧನ ಅಂತ ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ ಎಂದು ಖಾಸಗಿ ಶಾಲೆಯ ಮುಖ್ಯಸ್ಥ ಲೋಕೇಶ್ ತಾಳಿಕಟ್ಟಿ ಹೇಳಿದ್ದಾರೆ.

submit-a-letter-of-intent-cbse-syllabus-composition-lokesh-talikatti-arrested
ಸಾಂದೀಪಿನಿ ಶಾಲೆಯ ಮುಖ್ಯಸ್ಥರ ಹೇಳಿಕೆ

By

Published : Feb 1, 2023, 2:27 PM IST

Updated : Feb 4, 2023, 10:30 PM IST

ಬೆಂಗಳೂರು : ನಕಲಿ ನಿರಪೇಕ್ಷಣಾ ಪತ್ರ ಸಲ್ಲಿಸಿ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿದ್ದ ಆರೋಪದಡಿ ಸಾಂದೀಪಿನಿ ಇಂಟರ್​ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಮುಖ್ಯಸ್ಥ ಲೋಕೇಶ್ ತಾಳಿಕಟ್ಟೆ ವಿರುದ್ಧ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಅನ್ವಯ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸಾಂದೀಪಿನಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮತ್ತು ರೂಪ್ಸ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಲೋಕೇಶ್​​ ತಾಳಿಕಟ್ಟೆ ಅವರಿಗೆ ಪೊಲೀಸರು ನೋಟಿಸ್ ನೀಡಿ, ವಿಚಾರಣೆ ನಡೆಸಿದ್ದಾರೆ. ಈ ವಿಷಯವಾಗಿ ತಮ್ಮ ಬಂಧನವಾಗಿದೆ ಎಂಬ ವರದಿಗಳ ಕುರಿತು ತಾಳಿಕಟ್ಟೆ ಸ್ಪಷ್ಟನೆ ನೀಡಿದ್ದು, ತಮ್ಮನ್ನು ಪೊಲೀಸರು ಬಂಧಿಸಿಲ್ಲ, ವಿಚಾರಣೆ ನಡೆಸಿ ಕಳಿಸಿದ್ದಾರೆಂದು ಅವರು ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ತಾಳಿಕಟ್ಟಿಯ ಸಾಂದೀಪಿನಿ ಇಂಟರ್​ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಮುಖ್ಯಸ್ಥರಾಗಿರುವ ಲೋಕೇಶ್ ತಾಳಿಕಟ್ಟೆ, ಸಿಬಿಎಸ್‌ಸಿ ಪಠ್ಯಕ್ರಮ ಸಂಯೋಜನೆಗೆ ನಿರಪೇಕ್ಷಣಾ ಪತ್ರವನ್ನು ನಕಲಿಯಾಗಿ ಸೃಷ್ಟಿಸಿ ದೆಹಲಿಯ ಸಿಬಿಎಸ್‌ಸಿ ಬೋರ್ಡ್​ಗೆ ಸಲ್ಲಿಸಿ ಶಾಲೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕಾನೂನು‌ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಹಾಂತಯ್ಯ ಎಸ್ ಹೊಸ್ಮಠ ಅವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಲೋಕೇಶ್ ತಾಳಿಕಟ್ಟೆಗೆ ನೋಟಿಸ್ ನೀಡಿ ವಿಧಾನಸೌಧ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಈ ಟಿವಿ ಭಾರತದೊಂದಿಗೆ ಮಾತನಾಡಿರುವ ಲೋಕೇಶ್ ತಾಳಿಕಟ್ಟೆ, ದೂರಿನ ಬಳಿಕ ಪೊಲೀಸರು ನನ್ನನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಇದನ್ನೇ ಬಂಧನ ಅಂತ ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ. ಪೊಲೀಸ್​ ಠಾಣೆಗೆ ಸಲ್ಲಿಸಲಾದ ದೂರಿಗೆ ಸಂಬಂಧಿಸಿದ ದಾಖಲೆ ಸಲ್ಲಿಕೆಗೆ ಹೋಗಿರುವುದನ್ನೇ ಬಂಧನ ಎಂದು ಬಿಂಬಿಸಲಾಗಿದೆ. ನಾನು ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವಾಗ ಬಂಧಿಸಲು ಹೇಗೆ ಸಾಧ್ಯ..? ಎಂದು ಅವರು ಪ್ರಶ್ನಿಸಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿನ ಅಕ್ರಮಗಳನ್ನು ಬಯಲಿಗೆಳೆದ ಕಾರಣ ನನ್ನ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು, ನನ್ನ ಶಾಲೆ ಮೇಲೆ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅನಗತ್ಯವಾಗಿ ನನ್ನ ತೇಜೋವಧೆ ಮಾಡಲಾಗುತ್ತಿದೆ. ಪ್ರಾಮಾಣಿಕವಾಗಿ ಒಂದು ಇಲಾಖೆಯ ಭ್ರಷ್ಟಾಚಾರವನ್ನು ಬಯಲಿಗೆಳೆದದ್ದೇ ತಪ್ಪಾಯಿತಾ...?. ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕಿತ್ತು. ಆದರೆ ಅದು ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Last Updated : Feb 4, 2023, 10:30 PM IST

ABOUT THE AUTHOR

...view details