ಕರ್ನಾಟಕ

karnataka

ETV Bharat / state

ಆರು ತಿಂಗಳಿನಲ್ಲಿ ರಾಜ್ಯ ಶಿಕ್ಷಣ ನೀತಿ ಕುರಿತು ವರದಿ ಸಲ್ಲಿಕೆ: ಪ್ರೊ. ಸುಖದೇವ್ ಥೋರಟ್​​ - state education policy report

ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ಪ್ರೊಫೆಸರ್ ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಸಮಿತಿಯನ್ನು ರಚಿಸಿದ್ದು, ಇಂದು ಆಯೋಗದ ಮೊದಲ ಸಭೆ ನಡೆಯಿತು. 6 ತಿಂಗಳಲ್ಲಿ ಸರ್ಕಾರಕ್ಕೆ ನಮ್ಮ ಕಮಿಷನ್ ವರದಿ ನೀಡಲಿದೆ. ವರದಿ ಜಾರಿ ಮಾಡೋದು ಸರ್ಕಾರಕ್ಕೆ ಬಿಟ್ಟ ನಿರ್ಧಾರವಾಗಿದೆ ಎಂದು ಸಭೆ ಬಳಿಕ ಅವರು ತಿಳಿಸಿದ್ದಾರೆ.

State Education Policy Committee
State Education Policy Committee

By ETV Bharat Karnataka Team

Published : Nov 3, 2023, 6:57 PM IST

Updated : Nov 3, 2023, 7:19 PM IST

ಪ್ರೊಫೆಸರ್ ಸುಖ್‌ದೇವ್ ಥೋರಟ್

ಬೆಂಗಳೂರು:ಕರ್ನಾಟಕ ಸರ್ಕಾರ ರಾಜ್ಯ ಶಿಕ್ಷಣ ನೀತಿ ಕುರಿತು ಹಿಂದಿನ ವರದಿಗಳ ಅಧ್ಯಯನ ಹಾಗೂ ಇರುವ ವ್ಯವಸ್ಥೆಯನ್ನು ಪರಿಶೀಲಿಸಿ ಆರು ತಿಂಗಳಿನಲ್ಲಿ ವರದಿ ಸಲ್ಲಿಕೆ ಮಾಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಅದರಂತೆ 2024ರ ಮಾರ್ಚ್ ಒಳಗಡೆಯಲ್ಲಿಯೇ ನಾವು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ. ಭವಿಷ್ಯದಲ್ಲಿ ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆ ಹೇಗೆ ಇರಬೇಕು ಎನ್ನುವ ದೂರಗಾಮಿ ದೃಷ್ಟಿಕೋನ ಹಾಗೂ ಪ್ರಸ್ತುತ ಕಲಿಕೆಗೆ ಅಗತ್ಯವಿರುವಂತೆ ಪರಾಮರ್ಶೆ ನಡೆಸಿ ವರದಿ ಸಲ್ಲಿಕೆ ಮಾಡಲಿದ್ದೇವೆ ಎಂದು ಕರ್ನಾಟಕ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೆ ಸರ್ಕಾರ ರಚಿಸಿರುವ ಆಯೋಗದ ಅಧ್ಯಕ್ಷ ಸುಖದೇವ್ ಥೋರಟ್ ತಿಳಿಸಿದ್ದಾರೆ.

ಗಾಂಧಿನಗರದಲ್ಲಿರುವ ಉನ್ನತ ಶಿಕ್ಷಣ ಪರಿಷತ್​ನಲ್ಲಿ ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ(SEP) ಜಾರಿ ಹಿನ್ನಲೆ. ಸರ್ಕಾರ ರಚಿಸಿದ್ದ ಆಯೋಗದ ಮೊದಲ ಸಭೆ ನಡೆಸಲಾಯಿತು. ಆಯೋಗದ ಅಧ್ಯಕ್ಷ ಸುಖದೇವ್ ಥೋರಟ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ವರದಿ ತಯಾರಿಸುವ ಕುರಿತು ಪರಾಮರ್ಶೆ ನಡೆಸಲಾಯಿತು.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಆಯೋಗದ ಅಧ್ಯಕ್ಷ ಸುಖದೇವ್ , ಕರ್ನಾಟಕ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೆ ಕಮೀಷನ್ ನೇಮಕ ಮಾಡಿದೆ. ಕಮೀಷನ್​ಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದಾರೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ವ್ಯಾಪ್ತಿಗೆ ನೀತಿ ರಚನೆ ಮಾಡಲು ಸರ್ಕಾರ ಕಮೀಷನ್ ರಚನೆ ಮಾಡಿದೆ. ಮೊದಲ ಸಭೆಯಲ್ಲಿ ಸದ್ಯ ರಾಜ್ಯದಲ್ಲಿ‌ರುವ ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನ ಮಾಡಲಾಗಿದೆ. ಶೈಕ್ಷಣಿಕ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಬೇಕಾದ ಪ್ರಾಥಮಿಕ ಸಭೆ ಮಾಡಿದ್ದೇವೆ. ಸದ್ಯ ರಾಜ್ಯದಲ್ಲಿ‌‌ ಇರುವ ಶಿಕ್ಷಣ ನೀತಿ ಬಗ್ಗೆ ಪರಾಮರ್ಶೆ ಮಾಡಿದ್ದೇವೆ. ಗುಣಮಟ್ಟದ ಶಿಕ್ಷಣದ ಜೊತೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ನಮ್ಮ ‌ಮೊದಲ ಆದ್ಯತೆ ಆಗಿರಲಿದೆ. ಈಗ ಅಧ್ಯಯನ ಪ್ರಾರಂಭ ಮಾಡಲಾಗಿದೆ. 6 ತಿಂಗಳಲ್ಲಿ ಸರ್ಕಾರಕ್ಕೆ ನಮ್ಮ ಕಮೀಷನ್ ವರದಿ ನೀಡಲಿದೆ. ವರದಿ ಜಾರಿ ಮಾಡೋದು ಸರ್ಕಾರಕ್ಕೆ ಬಿಟ್ಟ ನಿರ್ಧಾರವಾಗಿದೆ ಎಂದರು.

ಈಗ ಇರುವ ಪಾಲಿಸಿಗಳ ಪರಿಶೀಲನೆ ಮಾಡಲಿದ್ದೇವೆ. ಹೊಸ ಶಿಕ್ಷಣ ನೀತಿ ಸೇರಿದಂತೆ ಹಲವು ಎಜುಕೇಶನ್ ಪಾಲಿಸಿ ರಿವ್ಯೂ ಮಾಡ್ತೀವಿ. ರಿವ್ಯೂ ಮಾಡಿದ ಬಳಿಕ ಚರ್ಚೆ ಮಾಡಿ ಉತ್ತಮ ಪಾಲಿಸಿ ರೆಡಿ ಮಾಡುವ ಕೆಲಸ ಮಾಡ್ತೀವಿ. ಶೈಕ್ಷಣಿಕ ವ್ಯವಸ್ಥೆಗೆ ಅನುಕೂಲವಾಗಿ ಇರೋ ಶಾಲೆಗಳು, ಉನ್ನತ ಶಿಕ್ಷಣ್ಕೆ ಸಂಬಂಧಿಸಿದ ಆಲ್ ಇಂಡಿಯಾ ಸರ್ವೆ, ನ್ಯಾಷನಲ್ ಸ್ಯಾಂಪಲ್ ಸರ್ವೆ, ನ್ಯಾಕ್ ರಿಪೋರ್ಟ್, ಎಲ್ಲರದ ಅಧ್ಯಯನ ಮಾಡಲಿದ್ದೇವೆ. ವಿವಿಧ ವರದಿಯಲ್ಲಿರೋ ಅಂಕಿ - ಅಂಶಗಳನ್ನು ಪಡೆದ ರಾಜ್ಯ ಶಿಕ್ಷಣ ನೀತಿ ಸಿದ್ದ ಮಾಡ್ತೀವಿ. ಕಮೀಷನ್​ಗೆ 6 ತಿಂಗಳು ಸಾಕಾಗದೇ ಹೋದರೆ ಸಮಯ ವಿಸ್ತರಣೆಗೆ ಸರ್ಕಾರಕ್ಕೆ ಮನವಿ ಮಾಡ್ತೀವಿ. ಆದರೆ, ಕಾಲಮಿತಿಯಲ್ಲಿಯೇ ವರದಿ ಸಲ್ಲಿಸುವುದಕ್ಕೆ ಆದ್ಯತೆ ನೀಡಲಿದ್ದೇವೆ ಎಂದರು.

ಶೈಕ್ಷಣಿಕ ವ್ಯವಸ್ಥೆ ಪರಾಮರ್ಶೆಯಲ್ಲಿ ವಿಸಿಗಳು,‌ ಶಿಕ್ಷಕರು, ವಿದ್ಯಾರ್ಥಿಗಳು, ಎನ್ಜಿಒಗಳು, ಶಿಕ್ಷಣ ಸಂಸ್ಥೆಗಳ ಜೊತೆ ಸಭೆಗಳನ್ನ ಮಾಡುತ್ತೇವೆ. 4 ವಿಭಾಗವಾರು ಸಭೆ ಮಾಡಿ ಎಲ್ಲರ ಅಭಿಪ್ರಾಯ ‌ಪಡೆದು ಪಾಲಿಸಿ ಸಿದ್ದತೆಗೆ ಕ್ರಮವಹಿಸುತ್ತೇವೆ. ಲಭ್ಯ ಇರುವ ಎಲ್ಲ ರಿಪೋರ್ಟ್​ಗಳು, ಅಂಕಿಗಳು, ವಿವಿಧ ಪಾಲಿಸಿಗಳು ಎಲ್ಲವನ್ನು ಅಧ್ಯಯನ ಮಾಡಿ ಪಾಲಿಸಿ ಸಿದ್ದತೆ ಮಾಡುತ್ತೇವೆ. ಇದೊಂದು ಉತ್ತಮ ಪಾಲಿಸಿ ಆಗಲಿದೆ. ಶಾಶ್ವತವಾಗಿ ಕರ್ನಾಟಕ ಶಿಕ್ಷಣ ವ್ಯವಸ್ಥೆಯನ್ನ ಉತ್ತಮಗೊಳಿಸುವ ಪಾಲಿಸಿ ಇದಾಗಲಿದೆ. ರಾಜ್ಯ ಪಠ್ಯಕ್ರಮ, ಸಿಬಿಎಸ್ಸಿ, ಐಸಿಎಸ್ಸಿ ಪಠ್ಯಕ್ರಮಕ್ಕೂ ಈ ಪಾಲಿಸಿ ಸಿದ್ದವಾಗಲಿದೆ ಎಂದರು.

ವಿದ್ಯಾರ್ಥಿಗಳ ಅಂಕಿ - ಅಂಶಗಳು, ದಾಖಲಾತಿ ವಿವರ ಸೇರಿದಂತೆ ಸದ್ಯದ ಶಿಕ್ಷಣ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಕರ್ನಾಟಕ ಸರ್ಕಾರ ಕೊಟ್ಟಿರೋ ಚೌಕಟ್ಟಿ‌ಲ್ಲಿ ಪಾಲಿಸಿ ಇರಲಿದೆ. ಇದೊಂದು ಸಮಗ್ರವಾದ ವರದಿ ಆಗಲಿದೆ. ಸಭೆಯಲ್ಲಿ ಹೇಗೆ ಪಾಲಿಸಿ ಮಾಡಬೇಕು, ಅದರ ರಚನೆ ಹೇಗೆ ಇರಬೇಕು ಅಂತ ಚರ್ಚೆ ಆಗಿದೆ. ಈಗ ಇರುವ ಪಾಲಿಸಿ ದಾಖಲೆಯಾಗಿ ಇಟ್ಟುಕೊಂಡು ಪಾಲಿಸಿ ರಚನೆಗೆ ನಿರ್ಧಾರ ಮಾಡಲಾಗಿದೆ. ಪಾಲಿಸಿಗೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು 9 ಉಪ ಸಮಿತಿ ಮಾಡಲಾಗಿದೆ. ಉಪ ಸಮಿತಿಗಳು ಒಂದೊಂದು ಕ್ಷೇತ್ರದಲ್ಲಿ ಪರಿಶೀಲನೆ ಮಾಡಿ ವರದಿಯನ್ನು ಕೊಡ್ತಾರೆ. ಅದರ ಆಧಾರದಲ್ಲಿ ಸಮಗ್ರ ವರದಿ ಸಿದ್ದ ಮಾಡುತ್ತೇವೆ. ವರದಿಯಲ್ಲಿ ತಕ್ಷಣದ ಮತ್ತು ಭವಿಷ್ಯದಲ್ಲಿ ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆ ಹೇಗೆ ಇರಬೇಕು ಎನ್ನುವ ಅಂಶ ಇರಲಿದೆ. ಕಾಲಮಿತಿಯಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ‌ಮಾಡುತ್ತೇವೆ ಎಂದರು.

ಇದನ್ನೂ ಓದಿ:ಇಂದಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿದ್ಯುತ್, ಕುಡಿಯುವ ನೀರು ಉಚಿತ: ಸಿಎಂ ಸಿದ್ದರಾಮಯ್ಯ ಘೋಷಣೆ

Last Updated : Nov 3, 2023, 7:19 PM IST

ABOUT THE AUTHOR

...view details