ಬೆಂಗಳೂರು:ಅನಾರೋಗ್ಯದ ನಿಮಿತ್ತ ನಗರದ ವೈಟ್ ಫೀಲ್ಡ್ನ ಸಾಯಿ ಬಾಬಾ ಆಸ್ಪತ್ರೆಗೆ ಬಂದು ಲಾಕ್ಡೌನ್ ವೇಳೆ ಊರಿಗೆ ತೆರಳಲು ಸಾಧ್ಯವಾಗದೆ ತನ್ನಲ್ಲಿರುವ ಹಣವನ್ನು ಖರ್ಚು ಮಾಡಿಕೊಂಡಿದ್ದ ಉತ್ತರ ಪ್ರದೇಶದ ವ್ಯಕ್ತಿಗೆ ಕಾಡುಗುಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಹೇಶ್, ಪ್ರಯಾಣಕ್ಕೆ ಹಣ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉತ್ತರ ಪ್ರದೇಶದ ವ್ಯಕ್ತಿ ಅನಾರೋಗ್ಯ ನಿಮಿತ್ತ ಎರಡೂವರೆ ತಿಂಗಳ ಹಿಂದೆ ವೈಟ್ ಫೀಲ್ಡ್ನ ಸಾಯಿ ಬಾಬಾ ಆಸ್ಪತ್ರೆಗೆ ಬಂದಿದ್ದ. ಕಡು ಬಡವನಾಗಿರುವ ಈ ವ್ಯಕ್ತಿ, ಸಾಯಿ ಬಾಬಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ಒಳಪಟ್ಟಿದ್ದ. ನಂತರ ದೇಶದಲ್ಲಿ ಲಾಕ್ಡೌನ್ ವೇಳೆ ಸಾರಿಗೆ ಸಂಪರ್ಕವಿಲ್ಲದೆ ತನ್ನ ರಾಜ್ಯಕ್ಕೆ ಹಿಂತಿರುಗಲು ಸಾಧ್ಯವಾಗದೆ ಬೆಳತೂರಿನಲ್ಲಿ ಉಳಿದುಕೊಂಡಿದ್ದು, ಸದ್ಯ ಊರಿಗೆ ತೆರಳಲು ನಿರ್ಧರಿಸಿದ್ದ.
ನಗರದಲ್ಲಿರುವ ಬೇರೆ ರಾಜ್ಯಗಳ ಜನರು ತಮ್ಮ ಊರಿಗೆ ತೆರಳಲು ಸರ್ಕಾರ ಅನುಮತಿ ನೀಡಿರುವುದರಿಂದ ಕಾಡುಗುಡಿ, ಮಹದೇವಪುರ, ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ವಲಸೆ ಬಂದ ಅನ್ಯ ರಾಜ್ಯಗಳ ಜನರಿಗೆ ಆರೋಗ್ಯ ತಪಾಸಣೆ ಮತ್ತಿತರ ಮಾಹಿತಿಗಳನ್ನು ಕಲೆಹಾಕುವ ವೇಳೆ ಉತ್ತರ ಪ್ರದೇಶದ ವ್ಯಕ್ತಿ ಊರಿಗೆ ತೆರಳಲು ಹಣ ಇಲ್ಲದ ಬಗ್ಗೆ ಇನ್ಸ್‌ಪೆಕ್ಟರ್ ಮಹೇಶ್ ಅವರ ಗಮನಕ್ಕೆ ಬಂದಿತ್ತು. ತಕ್ಷಣವೇ ಆ ವ್ಯಕ್ತಿಯನ್ನು ಕರೆದು ತಮ್ಮ ಕೈಯಿಂದ ಸಾವಿರ ರೂಪಾಯಿ ನೀಡಿ ಸರ್ಕಾರಿ ವಾಹನದ ಮೂಲಕ ಚಿಕ್ಕಬಾಣವಾರ ರೈಲ್ವೆ ನಿಲ್ದಾಣಕ್ಕೆ ತಮ್ಮ ಸಿಬ್ಬಂದಿಯೊಂದಿಗೆ ಕಳುಹಿಸಿದ್ದಾರೆ.