ಬೆಂಗಳೂರು: ಅಂತಾರಾಷ್ಟ್ರೀಯ ವ್ಯಾಪಾರ ಉತ್ತೇಜನ ಮತ್ತು ಹೂಡಿಕೆ ಆಕರ್ಷಣೆ ಏಜೆನ್ಸಿ ಆಗಿರುವ ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಹೂಡಿಕೆ ಆಯೋಗವು, ಭಾರತದ ವಿಶ್ವವಿದ್ಯಾಲಯಗಳ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಸ್ಟಡಿ ಆಸ್ಟ್ರೇಲಿಯಾ ಪ್ರದರ್ಶನ ಆಯೋಜಿಸಿತ್ತು. ಪ್ರದರ್ಶನವು ಫೆ. 17 ರಿಂದ ಬೆಂಗಳೂರಿನ ರೇವಾ ವಿವಿಯೊಂದಿಗೆ ಪ್ರಾರಂಭವಾಗಿದೆ. ಆಯೋಗದ ಅಧಿಕಾರಿಗಳು ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತದ ವಿದ್ಯಾರ್ಥಿಗಳಿಗೆ ನೆರವಾಗಲು ಆಸ್ಟ್ರೇಲಿಯಾ ಸರ್ಕಾರವು ಪರಿಚಯಿಸಿರುವ ವಿವಿಧ ಉಪಕ್ರಮಗಳನ್ನು ಪ್ರದರ್ಶನದಲ್ಲಿ ವಿವರಿಸಿದರು. ಮುಂಬರುವ ದಿನಗಳಲ್ಲಿ ಈ ಪ್ರದರ್ಶನ ಕೊಯಮತ್ತೂರು (ಫೆ.20) ಮತ್ತು ವಿಶಾಖಪಟ್ಟಣದಲ್ಲಿ (ಫೆ.22) ನಡೆಯಲಿದೆ ಎಂದು ಇದೇ ವೇಳೆ ತಿಳಿಸಲಾಯಿತು.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದ ವಿವಿಧ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೋಡ್ ಶೋದಲ್ಲಿ ಭಾಗವಹಿಸಿದ್ದರು. ಆಸ್ಟ್ರೇಲಿಯಾದ 13 ಉನ್ನತ ವಿಶ್ವವಿದ್ಯಾಲಯಗಳು ರೋಡ್ ಶೋದಲ್ಲಿ ತಮ್ಮ ಕೊಡುಗೆಗಳನ್ನು ಪ್ರದರ್ಶಿಸಿದವು. ಆಸ್ಟ್ರೇಲಿಯಾವು ವಿಶ್ವದ ಕೆಲವು ಅತ್ಯುತ್ತಮ ವಿಶ್ವವಿದ್ಯಾನಿಲಯಗಳಿಗೆ ನೆಲೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಕ್ಯುಎಸ್ (QS) ವಿವಿಗಳ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾದ 41 ವಿವಿಗಳ ಪೈಕಿ 36 ವಿವಿಗಳು ವಿಶ್ವದ ಅಗ್ರ 1000 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಮುಂಚೂಣಿ 100 ವಿವಿಗಳಲ್ಲಿ 7 ವಿವಿಗಳು ಸ್ಥಾನ ಪಡೆದಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅದರ ಫಲವಾಗಿ ಭಾರತದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಹೊಸ ಅವಕಾಶಗಳ ಬಗ್ಗೆ ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಹೂಡಿಕೆಯ ಬೆಂಗಳೂರು ಆಯುಕ್ತೆ ಡೆನಿಸ್ ಈಟನ್ ಅವರು ವಿವರಗಳನ್ನು ನೀಡಿದರು. ಭಾರತದಲ್ಲಿ ತಮ್ಮ ಕ್ಯಾಂಪಸ್ ಶಾಖೆಗಳನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಯುಜಿಸಿ ಇತ್ತೀಚೆಗೆ ವಿದೇಶಿ ವಿಶ್ವವಿದ್ಯಾಲಯಗಳಿಗೆ ಕರಡು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾದ ಶಿಕ್ಷಣವನ್ನು ಭಾರತದ ವಿದ್ಯಾರ್ಥಿಗಳ ಹತ್ತಿರ ತರುವ ಮತ್ತೊಂದು ಹೆಜ್ಜೆ ಇದಾಗಿದೆ ಎಂದು ಬಣ್ಣಿಸಲಾಗುತ್ತಿದೆ.