ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕಿನ ಕಾರಣಕ್ಕೆ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲರನ್ನೂ ತೇರ್ಗಡೆಗೊಳಿಸಲಾಗಿದೆ. ಎಸ್ಎಸ್ಎಲ್ಸಿ ಅಂಕ ಹಾಗೂ ಪ್ರಥಮ ಪಿಯುಸಿ ಅಂಕ, ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆ ಮೇರೆಗೆ ಅಂಕಗಳನ್ನು ಸೇರಿಸಿ ಫಲಿತಾಂಶ ಪ್ರಕಟಿಸಲಾಗಿತ್ತು. ಹಾಗೆಯೇ ಈ ಫಲಿತಾಂಶ ತೃಪ್ತಿಕರವಾಗಿಲ್ಲದೇ ಹೋದರೆ, ಅಂತಹವರಿಗೆ ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಸುವುದಾಗಿ ಪಿಯು ಬೋರ್ಡ್ ಹೇಳಿತ್ತು.
ಈ ವರ್ಷ ಒಟ್ಟು 6,66,497 ವಿದ್ಯಾರ್ಥಿಗಳು ಪಾಸ್ ಔಟ್ ಆಗಿದ್ದು, ಇದರಲ್ಲಿ ಬೆರಳಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಒಳ್ಳೆಯ ಪರ್ಸೆಂಟೇಜ್ ಬಂದಿದ್ದರೂ, ನಮಗೆ ಇನ್ನೂ ಜಾಸ್ತಿ ಅಂಕಗಳು ಬರಬೇಕಿತ್ತು. ಕೊರೊನಾ ಇದ್ದರೂ ಚೆನ್ನಾಗಿ ಓದಿದ್ದೆವು, ಹೀಗಾಗಿ ಶೇ.90ಕ್ಕೂ ಹೆಚ್ಚು ಅಂಕ ಬರುವ ನಿರೀಕ್ಷೆ ಇದೆ ಅಂತಾರೆ ವಿದ್ಯಾರ್ಥಿಗಳು. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ರಿಸಲ್ಟ್ ರಿಜೆಕ್ಟ್ ಇಲ್ಲದೇ ಇದ್ದರೂ ಫ್ರೆಶರ್ಸ್ ಹಾಗೂ ರಿಪಿಟರ್ಸ್ ಸೇರಿ 965 ವಿದ್ಯಾರ್ಥಿಗಳು ಪರೀಕ್ಷೆ ಬರೆಯೋಕೆ ನೋಂದಣಿ ಮಾಡಿಕೊಂಡಿದ್ದಾರೆ.
ಕೊಟ್ಟೂರು ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಫಲಿತಾಂಶ ತಿರಸ್ಕಾರ: ರಾಜ್ಯದಲ್ಲಿಯೇ ಒಂದೇ ಕಾಲೇಜಿನಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶ ತಿರಸ್ಕಾರ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರು ಇಂದು ಪಿಯು ಕಾಲೇಜಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಫಲಿತಾಂಶ ತೃಪ್ತಿಯಿಲ್ಲ, ಪರೀಕ್ಷೆ ಬರೆಯುತ್ತೇವೆ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಇಂದು ಪಿಯು ಕಾಲೇಜಿನ ಪ್ರಾಂಶುಪಾಲ ವೀರಭದ್ರಯ್ಯ, ನಮ್ಮ ಕಾಲೇಜಿನಿಂದ 104ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದಾರೆ. ಪ್ರತಿ ವರ್ಷ ಕಾಲೇಜಿನ ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದುಕೊಳ್ಳುತ್ತಿದ್ದರು. 600ಕ್ಕೆ 600 ಅಂಕಗಳನ್ನು ನಮ್ಮ ಕಾಲೇಜಿನ ಹೆಚ್ಚಿನ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದರು. ಆದರೆ ಈ ಸಲದ ಫಲಿತಾಂಶ ನಿರಾಸೆಯಾಗಿದೆ. ಶೇ.94ರಷ್ಟು ಅಂಕ ಬಂದಿರುವ ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕಾರ ಮಾಡಿದ್ದು, ಕಲಾ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿ ನಮ್ಮ ಕಾಲೇಜು ಬರುತ್ತಿತ್ತು. ಹೀಗಾಗಿ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದವಾಗಿದ್ದಾರೆ ಎಂದು ಹೇಳಿದರು.
ಪರೀಕ್ಷೆಗೆ ನೋಂದಣಿ ಮಾಡಿರುವ ವಿದ್ಯಾರ್ಥಿನಿ ಭವಾನಿ ಮಾತನಾಡಿ, ಕೊರೊನಾ ಕಾರಣಕ್ಕೆ ಈ ಬಾರಿ ಪರೀಕ್ಷೆ ನಡೆಸದೇ ಎಸ್ಎಸ್ಎಲ್ಸಿ ಪಿಯುಸಿ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಿದ್ದಾರೆ. ನನಗೆ ಶೇ. 92 ಫಲಿತಾಂಶ ಬಂದಿದ್ದು, ಇದು ತೃಪ್ತಿ ತಂದಿಲ್ಲ. ಇದಕ್ಕಿಂತ ಹೆಚ್ಚಿನ ಅಂಕ ಪಡೆಯುವ ನಿರೀಕ್ಷೆ ಇದೆ. ಹೀಗಾಗಿ ಪರೀಕ್ಷೆ ಬರೆಯುತ್ತೇನೆ ಎಂದರು.