ಬೆಂಗಳೂರು :ಆಫ್‌ಲೈನ್ ಮೂಲಕ ಪರೀಕ್ಷೆ ನಡೆಸುವ ಬದಲು ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲು ವಿವಿಗೆ ನಿರ್ದೇಶಿಸಬೇಕು ಎಂದು ಕೋರಿ 120ಕ್ಕೂ ಅಧಿಕ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ವಿಟಿಯು ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ ಅರ್ಜಿದಾರ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ವಕೀಲರು, ತಾವು ಪರೀಕ್ಷೆಯನ್ನು ರದ್ದುಪಡಿಸಲು ಕೋರುತ್ತಿಲ್ಲ.
ಬದಲಿಗೆ ಪರೀಕ್ಷೆ ನಡೆಸುವ ವಿಧಾನವನ್ನಷ್ಟೇ ಮಾರ್ಪಡಿಸಲು ಕೇಳುತ್ತಿದ್ದೇವೆ. ಒಂದು ವೇಳೆ ನಿಗದಿಯಾಗಿರುವಂತೆ ಆಫ್‌ಲೈನ್ ಪರೀಕ್ಷೆ ನಡೆಸಿದ್ರೆ ಸಾವಿರಾರು ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಬೆಂಗಳೂರಿಗೆ ಬರಬೇಕಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇಂತಹ ವಿಚಾರಗಳನ್ನು ನಾವು ನಿರ್ಧರಿಸುವುದು ಸೂಕ್ತವಲ್ಲ. ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ತಿಳಿದಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಎಸ್ಒಪಿ ಮಾರ್ಗಸೂಚಿಗಳ ಪ್ರಕಾರ ಈಗಾಗಲೇ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಹೈಕೋರ್ಟ್ ಕೂಡ ಆಫ್‌ಲೈನ್ ಮೂಲಕವೇ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತಿದೆ. ಹೀಗಾಗಿ, ನಿಮ್ಮ ಕೋರಿಕೆ ಪರಿಗಣಿಸುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ನೋಟಿಸ್ ಜಾರಿಗೆ ಆದೇಶಿಸಿತು.
ವಿದ್ಯಾರ್ಥಿಗಳ ಕೋರಿಕೆ :ರಾಜ್ಯದಲ್ಲಿ ಈಗಾಗಲೇ ಹಲವು ಜನರಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿದೆ. ಜೊತೆಗೆ ಕೋವಿಡ್ 2ನೇ ಅಲೆ ಭೀತಿಯೂ ಇದೆ. ಇಂತಹ ಸಂದರ್ಭದಲ್ಲಿ ವಿಟಿಯು ಆಫ್‌ಲೈನ್ ಮೂಲಕ ಪರೀಕ್ಷೆ ನಡೆಸಲು ಮುಂದಾಗಿದೆ. ಒಂದು ವೇಳೆ ವಿವಿ ಆಫ್‌ಲೈನ್ ಮೂಲಕವೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಿದ್ರೆ, ಹಲವು ವಿದ್ಯಾರ್ಥಿಗಳು ವಿವಿಧ ದೇಶ, ರಾಜ್ಯ, ಜಿಲ್ಲೆಗಳಿಂದ ಪ್ರಯಾಣಿಸಬೇಕಾಗುತ್ತದೆ.