ಬೆಂಗಳೂರು:ಸ್ನಾತಕೋತ್ತರ, ಪದವಿ, ಡಿಪ್ಲೊಮಾ ಕಾಲೇಜುಗಳ ಅಂತಿಮ ವರ್ಷದ ತರಗತಿಗಳು ಇಂದಿನಿಂದ ಆರಂಭವಾಗಿವೆ. ಕೋವಿಡ್ ಹಿನ್ನೆಲೆ 8 ತಿಂಗಳಿನಿಂದ ಬಂದ್ ಆಗಿದ್ದ ಕಾಲೇಜುಗಳು ಎಸ್ಒಪಿ ಮಾರ್ಗಸೂಚಿಯಂತೆ ಬಾಗಿಲು ತೆರೆಯುತ್ತಿವೆ. ಈ ಹಿನ್ನೆಲೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ನಗರದ ಮಹಾರಾಣಿ ಕ್ಲಸ್ಟರ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ವಿದ್ಯಾರ್ಥಿಗಳೊಂದಿಗೆ ಮಾತುಕತೆ ಕೂಡ ನಡೆಸಿದರು.
ನಂತರ ಮಾತಾನಾಡಿದ ಅವರು, ಎಂಟು ತಿಂಗಳ ನಂತರ ಕಾಲೇಜುಗಳು ಆರಂಭವಾಗಿವೆ. ಯುಜಿಸಿ ಗೈಡ್ ಲೈನ್ಸ್, ರಾಜ್ಯ ಸರ್ಕಾರದ ನಿರ್ಣಯ ಮತ್ತು ವಿದ್ಯಾರ್ಥಿಗಳು-ಪೋಷಕರ ಒತ್ತಾಯದ ಮೇರೆಗೆ ಕಾಲೇಜು ಆರಂಭ ಮಾಡಲಾಗಿದೆ. ಆನ್ಲೈನ್ ತರಗತಿಗಳು ತೃಪ್ತಿಕರವಾಗಿರಲಿಲ್ಲ, ಹಲವು ಸಮಸ್ಯೆಗಳು ಎದುರಿಸಬೇಕಾಯಿತು. ಹೀಗಾಗಿ ವಿದ್ಯಾರ್ಥಿಗಳು ಅವ್ರ ಅನುಕೂಲಕ್ಕೆ ತಕ್ಕಂತೆ ಆನ್ಲೈನ್ ಅಥವಾ ಆಫ್ಲೈನ್ ತರಗತಿಗಳಲ್ಲಿ ಕಲಿಯಬಹುದು ಎಂದರು.