ಬೆಂಗಳೂರು :ಶಾಲಾ ತರಗತಿಯಲ್ಲಿ ಬೋರ್ಡ್ ಮೇಲೆ ಬರಹ ಬರೆದು ಮಕ್ಕಳನ್ನು ಅವಮಾನಿಸಿದ ಆರೋಪದ ಮೇಲೆ ನಗರದ ವಿದ್ಯಾಸಾಗರ್ ಶಾಲೆಯ ಶಿಕ್ಷಕಿಯನ್ನು ವಜಾ ಮಾಡಲಾಗಿದೆ. ಈ ಬಗ್ಗೆ ಪೋಷಕರು, ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು.
ನಗರದ ಚಂದ್ರಾಲೇಔಟ್ನಲ್ಲಿರುವ ವಿದ್ಯಾಸಾಗರ್ ಇಂಗ್ಲಿಷ್ ಪಬ್ಲಿಕ್ ಶಾಲೆಯಲ್ಲಿ ಎಂದಿನಂತೆ ಮಕ್ಕಳು ತರಗತಿಗೆ ಬಂದಿದ್ದರು. ಪಾಠ ಮಾಡುತ್ತಿದ್ದ ಶಿಕ್ಷಕಿ, ವಿವಾದದ ಬರಹವನ್ನು ಬೋರ್ಡ್ ಮೇಲೆ ಬರೆದಿದ್ದಾರೆ ಎನ್ನಲಾಗಿದೆ. ಅದರ ಅರ್ಥವೇನು ಎಂಬುದಾಗಿ ವಿದ್ಯಾರ್ಥಿಗಳನ್ನು ಕೇಳಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿದ್ಯಾರ್ಥಿಯೊಬ್ಬರು, ಬರಹ ಅಳಿಸುವಂತೆ ಒತ್ತಾಯಿಸಿದ್ದರು. ಅದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿತ್ತು ಎಂದು ತಿಳಿದು ಬಂದಿದೆ.
ಕೆಲ ವಿದ್ಯಾರ್ಥಿಗಳು, ಪೋಷಕರಿಗೆ ವಿಷಯ ತಿಳಿಸಿದ್ದರು. ಶಾಲೆಗೆ ಬಂದ ಪೋಷಕರು, ಶಿಕ್ಷಕಿ ವಿರುದ್ಧ ಗರಂ ಆದರು. ಶಾಲೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಹೋಗಿದ್ದರು. ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿದರು. ನಂತರ, ಪೋಷಕರು ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದರು.
ಡಿಡಿಪಿಐ ಸ್ಪಷ್ಟನೆ :ಹಿಜಾಬ್ ವಿಚಾರಕ್ಕೆ ಸ್ಕೂಲ್ ಬಳಿ ಪ್ರತಿಭಟನೆ ಆಗಿಲ್ಲ. ಶಿಕ್ಷಕಿಯೊಬ್ಬರು ಅಸಭ್ಯ ಪದ ಬಳಸಿದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಶಿಕ್ಷಕರು ಮತ್ತು ಕೆಲ ಪೋಷಕರ ಜೊತೆ ಮಾತುಕತೆ ನಡೆಸಿದ್ದೇವೆ. 7ನೇ ತರಗತಿಯ ಮಕ್ಕಳಿಂದಲೂ ಏನಾಯ್ತು ಎಂದು ವಿಚಾರಿಸಿದ್ದೇವೆ.