ಆನೇಕಲ್: ಶಾಲೆಯಲ್ಲಿ ಆಯೋಜನೆ ಮಾಡಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯ ಸೇಂಟ್ ಫಿಲೋಮಿನಾ ಶಾಲೆಯಲ್ಲಿ ಬುಧವಾರ ಸಂಜೆ ನಡೆದಿದೆ. ಕಬಡ್ಡಿ ಆಟ ಆಡುತ್ತಿದ್ದಾಗ ರೈಡ್ ಗೆ ವಿದ್ಯಾರ್ಥಿನಿ ಹೋಗಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯನ್ನು ವಿರುದ್ಧ ತಂಡದ ಆಟಗಾರರು ಹಿಡಿಯಲು ಹೋಗಿದ್ದಾರೆ. ಈ ವೇಳೆ ರೈಡರ್ ಆಗಿದ್ದ ವಿದ್ಯಾರ್ಥಿನಿ ಸಂಗೀತಾಳಿಗೆ ಹೃದಯಾಘಾತವಾಗಿದೆ.
ತಕ್ಷಣವೇ ಆಕೆಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ವಿದ್ಯಾರ್ಥಿನಿ ಬದುಕುಳಿಯಲಿಲ್ಲ. ಆಸ್ಪತ್ರೆಯ ವೈದ್ಯರು ವಿದ್ಯಾರ್ಥಿನಿ ಸಂಗೀತಾ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಘೋಷಿಸಿದರು. ಮೃತ ಸಂಗೀತ(19) ಅತ್ತಿಬೆಲೆ ಸಮೀಪದ ಬಳಗಾರನಹಳ್ಳಿಯವಳಾಗಿದ್ದು, ಈಕೆ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಕಾಲೇಜಿನಲ್ಲಿ ಕ್ರೀಡಾ ಉತ್ಸವ ಆಚರಣೆಯ ಅಂಗವಾಗಿ ಮಹಿಳೆಯರ ತಂಡಕ್ಕೆ ಕಬಡ್ಡಿ ಪಂದ್ಯ ಆಯೋಜನೆ ಮಾಡಲಾಗಿತ್ತು.
ಹೀಗಾಗಿ ಸಂಗೀತ ಕೂಡ ಕಬಡ್ಡಿ ತಂಡದಲ್ಲಿ ಪಾಲ್ಗೊಂಡು ಆಟ ಆಡುತ್ತಿದ್ದಳು. ಈ ಸಂದರ್ಭದಲ್ಲಿ ಆಟ ಆಡುತ್ತಿದ್ದಾಗಲೇ ಸಂಗೀತಾಳಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಶಾಲೆಯ ಆಡಳಿತ ಮಂಡಳಿಯವರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿದೆ.
ಇದನ್ನೂ ಓದಿ:ದಾವಣಗೆರೆ: ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಹೃದಯಾಘಾತವಾಗಿ ಶಿಕ್ಷಕ ಸಾವು
ಧಾರವಾಡ ಮೂಲದ ಮೃತ ವಿದ್ಯಾರ್ಥಿನಿ ಸಂಗೀತ ಆನೇಕಲ್ ತಾಲೂಕಿನ ಬಳಗಾರನಹಳ್ಳಿಯಲ್ಲಿ ವಾಸವಿದ್ದರು ಎನ್ನಲಾಗಿದ್ದು, ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಅತ್ತಿಬೆಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಇನ್ನು, ವಿದ್ಯಾರ್ಥಿನಿ ಸಾವನ್ನಪ್ಪಿರುವ ಹಿನ್ನೆಲೆ ಇಂದು ಸೇಂಟ್ ಫಿಲೋಮಿನಾ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.
ಪಾಠ ಮಾಡುತ್ತಿದ್ದಾಗ ಹೃದಯಾಘಾತದಿಂದ ಶಿಕ್ಷಕ ಸಾವು: ದಾವಣೆಗೆರೆ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಶಿಕ್ಷಕ ಎನ್. ವಿಜಯ ಕುಮಾರ್ ಎಂಬುವವರು ಎಂದಿನಂತೆ ಬೆಳಗ್ಗೆ ಮಕ್ಕಳಿಗೆ ಪಾಠ ಮಾಡಲು ತರಗತಿಗೆ ಹೋಗಿದ್ದು, ಅಲ್ಲಿ ಎದೆ ನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣವೇ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಿಗೆ ವಿಷಯ ತಿಳಿಸಿ, ಕೂಡಲೇ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರು ಅಷ್ಟೊತ್ತಿಗೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಯಕ್ಷಗಾನ ರಂಗಸ್ಥಳದಲ್ಲೇ ಹೃದಯಾಘಾತ:ಈ ಹೃದಯಾಘಾತ ಅಥವಾ ಹೃದಯಸ್ತಂಭನ ದಿಢೀರ್ ಬಂದರೆಗುತ್ತೆ. ಹಾಗೆ ವಯಸ್ಸಿನ ಮಿತಿ ಇಲ್ಲದೆ ಸಮಯದ ಪರಿಯಿಲ್ಲದೆ ಸಂಭವಿಸುತ್ತದೆ. ಕಳೆದ ವರ್ಷದ ಡಿಸೆಂಬರ್ 22 ರಂದು ಯಕ್ಷಗಾನ ಕಲಾವಿದರೊಬ್ಬರು ರಂಗಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದರು. ಮಂಗಳೂರಿನ ಕಟೀಲು ಕ್ಷೇತ್ರದಲ್ಲಿ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷ ಯಕ್ಷಗಾನ ನಡೆಯುತ್ತಿದ್ದ ಸಂದರ್ಭದಲ್ಲಿ ಪಾತ್ರಧಾರಿಯಾಗಿದ್ದ ಗುರುವಪ್ಪ ಬಾಯರು ಎಂಬ ಕಟೀಲು ಮೇಳದ ಕಲಾವಿದರು ರಂಗಸ್ಥಳದಲ್ಲೇ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು.
ಇದನ್ನೂ ಓದಿ:ಮೃತಪಟ್ಟ ಹುಲಿ ಕೊರಳು, ಕಾಲಲ್ಲಿ ತಂತಿ: ವ್ಯಾಘ್ರನ ಕೊಂದರೇ ಹುಲಿ ಹಂತಕರು?